ಬೆಂಗಳೂರು ಕಂಬಳಕ್ಕೆ ಅದ್ದೂರಿ ತೆರೆ! ಜನರಿಂದ ಅಭೂತಪೂರ್ವ ಬೆಂಬಲ

ಕಳೆದೆರಡು ದಿನಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ತುಳುನಾಡಿನ ಜನಪದ ಕ್ರೀಡೆಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಕೋಣಗಳ ಓಟದ ಚಿತ್ರ
ಕೋಣಗಳ ಓಟದ ಚಿತ್ರ

ಬೆಂಗಳೂರು: ಕಳೆದೆರಡು ದಿನಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ತುಳುನಾಡಿನ ಜನಪದ ಕ್ರೀಡೆಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಶನಿವಾರ ತಡರಾತ್ರಿ ವರೆಗೆ ಕಂಬಳದ ಕೋಣಗಳ ಓಟವನ್ನ ಕಣ್ತುಂಬಿಕೊಂಡಿದ್ದ ಜನರು, ಕೊನೆ ದಿನವಾದ ಭಾನುವಾರವೂ ವೀಕ್ಷಿಸಿ ಸಂಭ್ರಮಿಸಿದರು.

ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಜನಪ್ರಿಯ ಕಂಬಳ ಕ್ರೀಡೆಯನ್ನು ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಿಂದ ಬಂದ ಲಕ್ಷಾಂತರ ಜನರು ವೀಕ್ಷಣೆ ಮಾಡಿದರು. ವಿದೇಶಿಗರು ಕೂಡಾ ಕಂಬಳ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.ರಾಜ, ಮಹಾರಾಜ ಕೆರೆಯಲ್ಲಿ ಕೋಣಗಳ ಜೋಡಿ ಓಟದ ಮೂಲಕ ಗಮನಸೆಳೆದ್ರೆ, ಅತ್ತ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ನೃತ್ಯತಂಡಗಳು ಜನರ ಮನತಣಿಸಿದವು. 

ಬಹುಮಾನ ವಿತರಣೆ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತಿತರರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜಿಸುವ ಮೂಲಕ, ಅದಕ್ಕೆ ರಾಜಧಾನಿಯ ರಾಜಗೌರವ ಸಮರ್ಪಣೆಯಾಗಿದೆ. ಇದು ಇಡೀ ಕರ್ನಾಟಕದ ಸಮಗ್ರ ಸಂಸ್ಕೃತಿ ಹಾಗೂ ಜನಪದ ಕ್ರೀಡೆಗಳ ಪರವಾಗಿ ಕಂಬಳ ಕ್ರೀಡೆಗೆ ದೊರೆತಿರುವ ಗೌರವವಾಗಿದೆ ಎಂದರು.

ಕಂಬಳ ಕರಾವಳಿ ಪ್ರದೇಶದ ಗ್ರಾಮೀಣ ಭಾಗದ ಜನರ ಸ್ವಾಭಿಮಾನ, ಸಾಹಸ ಹಾಗೂ ಶೌರ್ಯದ ಸಂಕೇತವಾಗಿದ್ದು, ಕಂಬಳ ಮಾದರಿಯ ಜನಪದ ಕ್ರೀಡೆಗಳಿಗೆ ವಿಶ್ವ ಮಾನ್ಯತೆ ದೊರೆಯುವಂತಾಗಲಿ, ಇದಕ್ಕೆ ಕಂಬಳ ಕ್ರೀಡೆ ಸ್ಪೂರ್ತಿಯಾಗಲೆಂದು ಹಾರೈಸುವುದಾಗಿ ತಿಳಿಸಿದರು. 

ಇಂದಿನ ಕಂಬಳಕ್ಕೆ ಸ್ಯಾಂಡಲ್ ವುಡ್, ಬಾಲಿವುಡ್ ತಾರೆಯರು ಸೇರಿದಂತೆ ಹಲವು ಗಣ್ಯರು ಕಂಬಳದ ಮೆರುಗನ್ನ ಮತ್ತಷ್ಟು ಹೆಚ್ಚಿಸಿದ್ರು. ರಕ್ಷಿತ್ ಶೆಟ್ಟಿ, ಉಪೇಂದ್ರ, ಪೂಜಾ ಹೆಗ್ಡೆ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು ಕರಾವಳಿಯ ಕ್ರೀಡೆ ಕಂಡು ಪುಳಕಿತರಾದರು. 

ಕಂಬಳ ಕೂಟದಲ್ಲಿ ಭಾಗಿಯಾಗಿದ್ದ 200 ಜೋಡಿ ಕೋಣಗಳ ಪೈಕಿ ಎಲ್ಲಾ ಕೋಣಗಳು ಬಹುಮಾನ ಗೆಲ್ಲಲು ಸಾಧ್ಯವಾಗದೇ ಇದ್ದರೂ ಬೆಂಗಳೂರು ಕಂಬಳ ನೋಡುಗರ ಮನಸೊರೆಗೊಳಿಸುವಲ್ಲಿ ಯಶಸ್ವಿಯಾಯಿತು. ಕಾಂತರ ಚಿತ್ರದಲ್ಲಿ ಸಿನಿಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು‌  ಚಿನ್ನದ ಪದಕವನ್ನ ಸಹ ಪಡೆದಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com