ಶಿವಮೊಗ್ಗ : ಕೋಮು ಸೂಕ್ಷ್ಮ ಪ್ರದೇಶ ಶಿವಮೊಗ್ಗದಲ್ಲಿ ಮತ್ತೊಮ್ಮೆ ಭಾರೀ ಗಲಾಟೆಯುಂಟಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಪೊಲೀಸರು ಭದ್ರತೆಗಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
7 ಮಂದಿಗೆ ಗಾಯ: ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿ ಗುಡ್ಡದಲ್ಲಿ ಕಿಡಿಗೇಡಿಗಳು ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ಅಲರ್ಟ್ ಆಗಿ, ಲಾಠಿ ಚಾರ್ಜ್ ನಡೆಸಿದರು. ಲಾಠಿಚಾರ್ಚ್ ನಲ್ಲಿ ಸಿಕ್ಕ ಸಿಕ್ಕ ಮನೆಯ ಗಾಜುಗಳು, ಕಿಟಕಿ ಗ್ಲಾಸ್ ಗಳು ನುಚ್ಚು ನೂರಾಗಿವೆ. ಮಹಿಳೆ ಸೇರಿ 7 ಮಂದಿಗೆ ಪೊಲೀಸರ ಲಾಠಿಚಾರ್ಚ್ ನಲ್ಲಿ ಗಾಯಗಳಾಗಿವೆ.
10 ಮಂದಿ ಬಂಧನ: ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡುತ್ತಿದ್ದಾಗ ಸ್ಥಳೀಯರು, ಪೊಲೀಸರು, ಮಾಧ್ಯಮದವರಿಗೂ ಗಾಯಗಳಾಗಿದೆ. ಎಸ್.ಪಿ. ಮಿಥುನ್ ಕುಮಾರ್ ಮೇಲೂ ಕಲ್ಲೆಸೆತವಾಗಿದೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಗಲಭೆಯಲ್ಲಿ ಪೊಲೀಸರು ಇದುವರೆಗೆ 10 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಶಿವಮೊಗ್ಗ ನಗರದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
ನಡೆದ ಘಟನೆಯೇನು?: ನಿನ್ನೆ ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ತಲ್ವಾರ್ ಮಾದರಿ ಕಟೌಟ್ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿತ್ತು. ಕಟೌಟ್ ವಿಚಾರವಾಗಿ ಹಿಂದೂ-ಮುಸ್ಲಿಂ ಗದ್ದಲ ಎದ್ದಿತ್ತು. ರಾಗಿಗುಡ್ಡ ಮುಖ್ಯರಸ್ತೆಯಲ್ಲಿ ಕಟೌಟ್ ಹಾಕಲಾಗಿದ್ದು ಜನರು ಶಿವಮೊಗ್ಗ ಹೊನ್ನಾಳಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ತಕ್ಷಣವೇ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ನಿಷೇಧಾಜ್ಞೆ ಜಾರಿ ಮಾಡಿ ಪರಿಸ್ಥಿತಿ ನಿಯಂತ್ರಿಸಲಾಗಿತ್ತು.
ಶಿವಮೊಗ್ಗದ ರಾಗಿಗುಡ್-ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿದೆ. ಟಿಪ್ಪುವಿನ ಕಟೌಟ್ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಸಂಗತಿ ಇದ್ದ ಹಿನ್ನಲೆಯಲ್ಲಿ ಪೊಲೀಸರು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ: ಮಹಾನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೆ 144 section ಜಾರಿ ಮಾಡಲಾಗಿದ್ದು, ಸದ್ಯ ಶಾಂತಿ ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಶಾಂತಿನಗರದಲ್ಲಿ ಹೆಚ್ಚುವರಿ ಪೊಲೀಸ್ ಬಲ ನಿಯೋಜನೆ ಮಾಡಲಾಗಿದೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಳ್ಳಂಬೆಳಗ್ಗೆ ತೆರೆದ ಕೆಲವು ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು. ಶಾಲಾ ಬಸ್ಸುಗಳನ್ನು ಮರಳಿ ಕಳಿಸಲಾಯಿತು.
ಗಾಯಾಳುಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರು, ಆಸ್ತಿಪಾಸ್ತಿ ಹಾನಿಗೊಳಗಾದವರಿಂದ ದೂರು ಸ್ವೀಕಾರ ಮಾಡಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದು, ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರಿಗೂ ಗಾಯವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಸಿಸಿ ಟಿವಿ ಫೂಟೇಜ್ ಮತ್ತಿತರ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ.
ರಾತ್ರಿ ಕಲ್ಲು ತೂರಾಟ ನಡೆದ ಘಟನಾ ಸ್ಥಳವನ್ನು ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಪರಿಶೀಲಿಸಿದರು. ಪರಿಸ್ಥಿತಿಯ ಬಗ್ಗೆ ಡಿಸಿ ಡಾ.ಆರ್.ಸೆಲ್ವಮಣಿ ವಿವರ ಪಡೆದಿದ್ದಾರೆ. ಶಾಸಕ ಚನ್ನಬಸಪ್ಪ ಶಾಂತಿನಗರಕ್ಕೆ ಭೇಟಿ ನೀಡಿದ್ದು, ಆಸ್ತಿ ಪಾಸ್ತಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Advertisement