ಶಂಕಿತ ಐಸಿಸ್ ಉಗ್ರನಿಗೆ ಕರ್ನಾಟಕದ ನಂಟು: ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ; ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎನ್ನಲಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಅಲಿಯಾಸ್ ಶಫಿ ಉಜ್‌ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ.
ಐಸಿಸಿ ಉಗ್ರ ಶಹನವಾಜ್ ಬಂಧನ
ಐಸಿಸಿ ಉಗ್ರ ಶಹನವಾಜ್ ಬಂಧನ

ಹುಬ್ಬಳ್ಳಿ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎನ್ನಲಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಅಲಿಯಾಸ್ ಶಫಿ ಉಜ್‌ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ.

ಭಯೋತ್ಪಾದಕ ಶಹನವಾಜ್ ಬಂಧನದ ನಂತರ, ಆತನಿಗೆ ಕರ್ನಾಟಕದ ನಂಟಿರುವ ಕುರಿತು ಬೆಳಕಿಗೆ ಬಂದಿತ್ತು.

ಈ ಬೆಳವಣಿಗೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್, ನಾವು ದೆಹಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬಂಧಿತ ಉಗ್ರನಿಗೆ ಹುಬ್ಬಳ್ಳಿ-ಧಾರವಾಡದ ನಂಟಿರುವುದು ಬೆಳಕಿಗೆ ಬಂದಿರುವುದರಿಂದ ಎಲ್ಲ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದರು.

ಆದರೆ, ಭಯೋತ್ಪಾದಕರು ಇಲ್ಲಿ ತರಬೇತಿ ಪಡೆದಿದ್ದಾರೆಯೇ ಅಥವಾ ಅವರು ಹುಬ್ಬಳ್ಳಿ-ಧಾರವಾಡದಿಂದ ಬಂದವರೇ ಅಥವಾ ಅವರು ಎಲ್ಲಿಗೆ ಸೇರಿದವರು ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ರೇಣುಕಾ ಸುಕುಮಾರ್ ಹೇಳಿದ್ದಾರೆ.

ದೆಹಲಿ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಾವು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸುತ್ತಿದ್ದೇವೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯು ಯಾವುದೇ ನಿರ್ದಿಷ್ಟ ಸ್ಥಳದ ಬಗ್ಗೆ ಹೇಳಿಲ್ಲ. ನಮ್ಮ ಪೊಲೀಸರು ಜಾಗರೂಕರಾಗಿದ್ದು, ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗುಪ್ತಚರ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ' ಎಂದು ಅವರು ಹೇಳಿದರು.

ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಶಹನವಾಜ್‌ನನ್ನು ಭಾನುವಾರ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ತೆಗೆ (ಎನ್ಐಎ) ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಈತನೂ ಒಬ್ಬ. ಈತ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದೆ.

ಪುಣೆ ಪೊಲೀಸರ ವಶದಲ್ಲಿದ್ದ ಶಹನವಾಜ್ ಅವರಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದ. ಈತನ ಕುರಿತು ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಇಂಜಿನಿಯರ್ ಆಗಿರುವ ಶಹನವಾಜ್‌ನನ್ನು ದೆಹಲಿಯ ಆಗ್ನೇಯ ಪ್ರದೇಶದಿಂದ ದೆಹಲಿ ಪೋಲೀಸರ ವಿಶೇಷ ತಂಡ ಬಂಧಿಸಿತ್ತು. ಸದ್ಯ ವಿಚಾರಣೆ ನಡೆಯುತ್ತಿದೆ. ಜತೆಗೆ ಇಂತದ್ದೇ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ನಾಲ್ಕೈದು ಜನರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com