ಬೆಂಗಳೂರು: ಟೆಂಡರ್ ಶ್ಯೂರ್ ರಸ್ತೆಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದು, ಕೇಬಲ್ ಹಾಕುವ ಸಲುವಾಗಿ ರಸ್ತೆಗಳನ್ನು ಅಗೆಯದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಸಂತನಗರದ ಅಯ್ಯಪ್ಪ ಸ್ವಾಮಿ ದೇಗುಲದ ಪಕ್ಕದ ಒಳಚರಂಡಿ ಕಾಮಗಾರಿ, ಜಯಮಹಲ್ ಅರಮನೆ ರಸ್ತೆ ಅಗಲೀಕರಣ, ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಡಿಸಿಎಂ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿದೆ. ಇನ್ನು ಮುಂದೆ ಯಾರೂ ಟೆಂಡರ್ ಶ್ಯೂರ್ ರಸ್ತೆಗಳನ್ನು ಅಗೆಯಬಾರದು. ಪಕ್ಕದ ಚರಂಡಿಯಿಂದ ಕೇಬಲ್ ಹಾಕಲು ವ್ಯವಸ್ಥೆ ಮಾಡಿದ್ದೇವೆ ಆದರೆ ಯಾರೂ ಬಳಸುತ್ತಿಲ್ಲ. ನಾವು ಈ ವ್ಯವಸ್ಥೆಯನ್ನು ಎಲ್ಲಿ ಸ್ಥಾಪಿಸಿದ್ದೇವೆಯೋ ಅಲ್ಲೆಲ್ಲಾ, ಅದನ್ನು ಕಾನೂನುಬದ್ಧವಾಗಿ ಬಳಸಬೇಕು. ಬೆಂಗಳೂರಿನ ಸೌಂದರ್ಯ ಹೆಚ್ಚಿಸಲು ನೆಲದಡಿಯಲ್ಲಿ ಕೇಬಲ್ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ಹೊರ ವರ್ತುಲ ರಸ್ತೆಯನ್ನು ಪರಿಶೀಲಿಸಿ ಸಂಚಾರ ಸಮಸ್ಯೆ ಬಗೆಹರಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು. ಸೆ.27ರಂದು ಒಆರ್‌ಆರ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿರುವುದ್ದನ್ನು ಇಲ್ಲಿ ಸ್ಮರಿಸಬಹುದು.
ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮತ್ತೆ ನೀರು ಪೋಲಾಗುವ ಘಟನೆಗಳು ಮರುಕಳಿಸಬಾರದು ಎಂದರು. ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಬಹುದು. ಗುಂಡಿಗಳನ್ನು ಸರಿಪಡಿಸಲು ಬಿಬಿಎಂಪಿ ಹಾಗೂ ಪೊಲೀಸರು ಒಟ್ಟಾಗಿ ಶ್ರಮಿಸಲಿದ್ದಾರೆ. ಈ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್‌ಗಳ ಕುರಿತು ಮಾತನಾಡಿದ ಅವರು, ನಗರೋತ್ಥಾನ ಅನುದಾನದಲ್ಲಿ 5,000 ಕೋಟಿ ವೆಚ್ಚದ 352 ಪ್ಯಾಕೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಮಗಾರಿಗಳ ತನಿಖೆಯೂ ಮುಂದುವರಿದು ವರದಿ ಸಲ್ಲಿಸಲಾಗುವುದು. ಬಿಲ್ ಪಾವತಿಗೆ ಸರಕಾರ 675 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೇ. 50-75 ರಷ್ಟು ಬಿಲ್‌ಗಳು ಕ್ಲಿಯರ್ ಆಗಿದ್ದು, 432 ಕೋಟಿ ರೂ. ಬಿಬಿಎಂಪಿ ಅನುದಾನವೂ ಬಿಡುಗಡೆಯಾಗಲಿದೆ. ಉಳಿದ ಬಾಕಿಯನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement