ಶಿವಮೊಗ್ಗದ ಗಲಾಟೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಇತ್ತೀಚೆಗೆ ಶಿವಮೊಗ್ಗದಲ್ಲಿ ಈದ್-ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಟೀಕಿಸಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಇತ್ತೀಚೆಗೆ ಶಿವಮೊಗ್ಗದಲ್ಲಿ ಈದ್-ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆಯನ್ನು ಬಿಜೆಪಿ ವೈಭವೀಕರಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಟೀಕಿಸಿದ್ದಾರೆ.

ಶಿವಮೊಗ್ಗ ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದಾದ ನಂತರವೂ ಬಿಜೆಪಿ ನಾಯಕರು ಘಟನೆಯನ್ನು ವೈಭವೀಕರಿಸುತ್ತಿದ್ದಾರೆ. ಯಾಕೆ ಈ ವೈಭವೀಕರಣ? ಇದು ರಾಜಕೀಯ ಲಾಭಕ್ಕಾಗಿಯೇ? ಅಥವಾ ಯಾವುದೇ ಸಾವು ಸಂಭವಿಸಿಲ್ಲ ಎಂದು ನೀವು (ಬಿಜೆಪಿ) ಹತಾಶರಾಗಿದ್ದೀರಾ? ಎಂದು ಸಚಿವರು ಪ್ರಶ್ನಿಸಿದರು.

'ಈ ಘಟನೆಯಲ್ಲಿ ಯಾರಾದರೂ ಸಾಯುತ್ತಾರೆ ಎಂದು ಬಿಜೆಪಿ ಕುತೂಹಲದಿಂದ ಎದುರು ನೋಡುತ್ತಿತ್ತು. ಇಡೀ ದೇಶದಲ್ಲಿ ಮೃತದೇಹಗಳ ಮೇಲೆ ರಾಜಕೀಯ ಮಾಡುವುದರಲ್ಲಿ ಅವರು ಪರಿಣಿತರು. ರಾಜ್ಯದಲ್ಲಿ ಯಾರೇ ಸತ್ತರೂ, ಮಳೆಗಾಲದಲ್ಲಿ ಜಿಗಣೆಗಳು ಹೇಗೆ ಇದ್ದಕ್ಕಿದ್ದಂತೆ ಹುಟ್ಟುತ್ತವೆಯೋ ಹಾಗೆ ಬಿಜೆಪಿ ನಾಯಕರು ಕ್ರಿಯಾಶೀಲರಾಗುತ್ತಾರೆ' ಎಂದು ಅವರು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಶಿವಮೊಗ್ಗದಲ್ಲಿ ನಡೆದಂತಹ ಘಟನೆಗಳು ರಾಜ್ಯದಲ್ಲಿ ವರದಿಯಾಗಿವೆ. ನಂತರ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ಮಾತ್ರ ನೀಡಿತ್ತು. ಆದರೆ, ನಮ್ಮ ಸರ್ಕಾರ ಯಾವುದೇ ಕರುಣೆ ತೋರದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, ಹಿಂದೂಗಳನ್ನು ಧಿಕ್ಕರಿಸುವ ಕಾಂಗ್ರೆಸ್ ಸರ್ಕಾರದ ಮೊಂಡುತನದ ನೀತಿಯನ್ನು ಸಹಿಸುವುದಿಲ್ಲ ಎಂದು ಬುಧವಾರ ಹೇಳಿದ್ದು, ಅದಕ್ಕೆ ತಕ್ಕ ಉತ್ತರ ನೀಡುವುದಾಗಿ ಹೇಳಿದೆ.

'ಹಿಂದೂಗಳನ್ನು ಪ್ರಚೋದಿಸಬೇಡಿ. ಕತ್ತಿ ಅಥವಾ ಚಾಕುಗಳಿಂದ ಬೆದರಿಕೆ ಹಾಕಲು ಪ್ರಯತ್ನಿಸಬೇಡಿ. ಇದಕ್ಕೆಲ್ಲಾ ತಕ್ಕ ಉತ್ತರ ನೀಡಲಾಗುವುದು. ಹಿಂದೂಗಳ ಮೇಲೆ ದಾಳಿಯಾದರೆ, ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಅನಿವಾರ್ಯವಾಗಿ ಪ್ರತಿ ದಾಳಿ ನಡೆಸಬೇಕಾಗುತ್ತದೆ. ಹಿಂದೂಗಳು ಎಲ್ಲಾ ಕಾಲದಲ್ಲೂ ಸಹಿಸಿಕೊಳ್ಳುತ್ತಾರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ಮೂರ್ಖತನವಾಗಿರುತ್ತದೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಲ್ಲಿ ಅರವಿಂದ ಬೆಲ್ಲದ್ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಇದ್ದರು.

ಕಳೆದ ಭಾನುವಾರ ಶಿವಮೊಗ್ಗದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 27 ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು 64 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com