ಶಿವಮೊಗ್ಗ ಗಲಭೆ ಸರ್ಕಾರದ ಓಲೈಕೆ ರಾಜಕಾರಣದ ಫಲ: ಮಾಜಿ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರ ಒಂದು ಸಮುದಾಯದ ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದ ಶಿವಮೊಗ್ಗದ ಗಲಭೆಗೆ ಪ್ರೇರಣೆಯಾಗಿದ್ದು, ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಹಿಡಿದು ಒಳಗೆ ಹಾಕುವ ಬದಲು ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ...
ಮಾಜಿ ಸಿಎಂ ಬೊಮ್ಮಾಯಿ.
ಮಾಜಿ ಸಿಎಂ ಬೊಮ್ಮಾಯಿ.
Updated on

ಬೆಂಗಳೂರು: ರಾಜ್ಯ ಸರ್ಕಾರ ಒಂದು ಸಮುದಾಯದ ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದ ಶಿವಮೊಗ್ಗದ ಗಲಭೆಗೆ ಪ್ರೇರಣೆಯಾಗಿದ್ದು, ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಹಿಡಿದು ಒಳಗೆ ಹಾಕುವ ಬದಲು ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಆರೋಪಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಗಲಭೆ ಮಾಡಿಸುತ್ತಿದ್ದಾರೆಂದು ಸಚಿವರೇ ದಾರಿ ತಪ್ಪಿಸುತ್ತಿದ್ದಾರೆ‌.‌ ಯಾರು ಕ್ರಮ ಕೈಗೊಳ್ಳಬೇಕೊ ಅವರೇ ಹೀಗೆ ಹೇಳಿದರೆ ಸರ್ಕಾರದ ಮೇಲೆ ಜನ ಭರವಸೆ ಇಡುವುದು ಹೇಗೆ ? ಗೃಹ ಸಚಿವರು ಇದು ಸಣ್ಣ ಘಟನೆ ಅಂತ ಹೇಳಿದ್ದಾರೆ. ಈ ಸರ್ಕಾರದ ತುಷ್ಟೀಕರಣದ ನೀತಿಯೇ ಸಮಾಜಘಾತುಕ ಶಕ್ತಿಗಳು ಹೆಚ್ಚಾಗಲು ಕಾರಣವಾಗಿದೆ. ಗಡಿ ಜಿಲ್ಲೆಗಳಲ್ಲಿ ಸಮಾಜಘಾತುಕ‌ಶಕ್ತಿಗಳು ಜಾಲ ವ್ಯಾಪಿಸಿಕೊಳ್ಳಲು ಕಾರಣವಾಗಿದೆ‌ ಎಂದು ಹೇಳಿದರು.

ಇಷ್ಟೇ ಅಲ್ಲದೇ ಈ ರೀತಿಯ ಕೇಸ್‌ಗಳಲ್ಲಿ ಅರೆಸ್ಟ್ ಆದವರನ್ನು ಬಿಡುಗಡೆ ಮಾಡುವಂತೆ ಸಚಿವರು, ಶಾಸಕರು ಒತ್ತಾಯ ಮಾಡುವುದನ್ನು ನೋಡಿದರೆ ಈ ಸರ್ಕಾರ ಏನು ಮಾಡಲು ಹೊರಟಿದೆ ಅಂತ ತಿಳಿಯುತ್ತಿಲ್ಲ. ಹಿಂದೆ ಪಿಎಫ್‌ಐನಲ್ಲಿ ಇದ್ದವರೇ ಹುಬ್ಬಳ್ಳಿ ಗಲಭೆಯಲ್ಲಿ ಇದ್ದರು. ಡಿಸಿಎಂ ಶಿವಕುಮಾರ್ ಅವರೇ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡವರ ಪ್ರಕರಣ ವಾಪಸ್ ಪಡೆಯಲು ಪತ್ರ ಬರೆದಿದ್ದಾರೆ ಎಂದರೆ ಏನರ್ಥ? ಶಿವಮೊಗ್ಗ ಘಟನೆ ಸಣ್ಣ ಘಟನೆ ಅಂತ ಗೃಹ ಸಚಿವರು ಹೇಳಿದ್ದಾರೆ. ಈಗ ತಪ್ಪಿನ ಅರಿವಾಗಿ ತಾವು ಹೇಳಿಲ್ಲ ಅಂತ ತಿರುಗಿಸುತ್ತಿದ್ದಾರೆ. ಉಡುಪಿಯಲ್ಲಿ ಹಿಂದೂ ಸಂಘಟನೆಗಳು ಕಾರ್ಯಕ್ರಮಕ್ಕೆ ಹಾಕಿರುವ ಬ್ಯಾನರ್ ಗಳನ್ನು ತೆರವುಗೊಳಿಸುವುದು ಓಲೈಕೆ ರಾಜಕಾರಣದ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಜಾತಿ ಸಮೀಕ್ಷೆ ಕುರಿತು ಮಾತನಾಡಿ, ನಾವು ಜಾತಿ ಸಮೀಕ್ಷೆ ವಿರೋಧ ಮಾಡಿಲ್ಲ. ರಾಜ್ಯ ಸರ್ಕಾರ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಿಸಿದ್ದು, ಅದು ಜಾತಿ ಗಣತಿ ಅಲ್ಲ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ‌. ಉತ್ತರ ಭಾರತದ ಜಾತಿ ಸಮೀಕರಣಕ್ಕೂ ದಕ್ಷಿಣ ಭಾರತದ ಜಾತಿ ಸಮಿಕರಣಕ್ಕೂ ವ್ಯತ್ಯಾಸ ಇದೆ. ಈ ವರದಿಯಿಂದ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಸರ್ಕಾರಕ್ಕೆ ಇದೆ ಎಂದರು.

ಈ ವರದಿಯಲ್ಲಿ ಏನಿದೆ ಅಂತ ಗೊತ್ತಿಲ್ಲ. ಈಗಾಗಲೇ ವರದಿ ಸೋರಿಕೆ ಆಗಿದೆ ಅಂತ ಆರೋಪ ಇದೆ. ಹೀಗಾಗಿ ಈ ವರದಿಯಲ್ಲಿ ಏನಿದೆಯೊ ಗೊತ್ತಿಲ್ಲ‌‌. ವರದಿ ಬಂದ ಮೇಲೆ ನೋಡೊಣ. ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗಲೇ ವರದಿ ಸ್ವೀಕಾರ ಮಾಡಬಹುದಿತ್ತು. ಆದರೆ ಆಗ ಚುನಾವಣೆ ಬಂತು ಅಂತ ಜಾರಿ ಮಾಡಿಲ್ಲ. ಈಗ ಏನು ಮಾಡುತ್ತಾರೊ ನೋಡೋಣ ಎಂದು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com