ಹಿಂದುಳಿದ ವರ್ಗಗಳಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಶಿಫಾರಸ್ಸಿಗೆ ರಾಜ್ಯ ಸಂಪುಟ ಅಸ್ತು!

ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ಮೀಸಲಾತಿ ನೀಡುವ ಕುರಿತಂತೆ ಆಯೋಗ ಮಾಡಿರುವ 5 ಶಿಫಾರಸ್ಸಿನಲ್ಲಿ ಮೂರು ಶಿಫಾರಸ್ಸಿಗೆ ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆ
ಸಂಪುಟ ಸಭೆ

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ಮೀಸಲಾತಿ ನೀಡುವ ಕುರಿತಂತೆ ಆಯೋಗ ಮಾಡಿರುವ 5 ಶಿಫಾರಸ್ಸಿನಲ್ಲಿ ಮೂರು ಶಿಫಾರಸ್ಸಿಗೆ ಒಪ್ಪಿಗೆ ನೀಡಲಾಗಿದೆ.

ಒಟ್ಟಾರೆ ಶೇ. 50ರಷ್ಟು ಮೀಸಲಾತಿ ಮೀರದಂತೆ ಶೇ 33ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಕೊಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್‌.ಕೆ ಪಾಟೀಲ್ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌.ಕೆ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಳು ವಿಷಯ ಪರಿಗಣಿಸಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕೆ ಸಮಿತಿ ರಚಿಸಲಾಗಿತ್ತು. ಭಕ್ತವತ್ಸಲ ಸಮಿತಿಯ 5 ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಹಬ್ ಮತ್ತು ಸ್ಪೋಕ್ಸ್ ಮಾದರಿಯಲ್ಲಿ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಪ್ರೊಗ್ರಾಂಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಬ್ರೇನ್ ಹೆಲ್ತ್ ಇನಿಶಿಯೇಟಿವ್ ಅಡಿಯಲ್ಲಿ ಮೆದುಳಿನ ಆರೋಗ್ಯ, ಆರೈಕೆ, ತಲೆನೋವು ಹಾಗೂ ಒತ್ತಡ ನಿರ್ವಹಣೆ ಸೇರಿ ಹಲವು ಕಾರ್ಯಕ್ರಮಗಳಿಗೆ ಬ್ರೇನ್ ಹೆಲ್ತ್ ಇನಿಶಿಯೇಟಿವ್ ಅನುವು ಮಾಡಿಕೊಡಲಿದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಚುನಾವಣೆ ನಿರ್ವಹಣೆ, ಆಡಳಿತ ಸುಧಾರಣಾ ಇಲಾಖಾ ವ್ಯಾಪ್ತಿಗೆ ತರುವ ಶಿಫಾರಸ್ಸನ್ನು ಇಂದು ಕ್ಯಾಬಿನೆಟ್ ಒಪ್ಪಿದ್ದು, ಈ ಹಿಂದೆ ಪಂಚಾಯತ್ ರಾಜ್ ಇಲಾಖೆ ಜೊತೆಗೆ ಚುನಾವಣಾ ಆಯೋಗ ಸಮನ್ವಯ ಸಾಧಿಸುತ್ತಿತ್ತು. ಇದೀಗ ಆಡಳಿತ ಸುಧಾರಣಾ ಇಲಾಖೆ ಅಡಿಯಲ್ಲಿ ನಿರ್ವಹಣೆ ಮಾಡಲಾಗುವುದು. ರಾಜ್ಯ ಮುಖ್ಯ ಚುನಾವಣಾ ಆಯೋಗ ಕೂಡ ಇನ್ನುಮುಂದೆ ಆಡಳಿತ ಸುಧಾರಣಾ ಇಲಾಖೆ ಜೊತೆಗೆ ಚರ್ಚೆ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com