ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಎಕ್ಸ್‌ ಕಾರ್ಪ್‌ ಪ್ರಕರಣ: ಖಾತೆ ನಿರ್ಬಂಧ ಆದೇಶದ ಕಾರಣಗಳನ್ನು ಕೇಂದ್ರ ತಡೆಹಿಡಿಯಬಹುದೇ: ಹೈಕೋರ್ಟ್‌ ಪ್ರಶ್ನೆ

ವೈಯಕ್ತಿಕ ಖಾತೆ ನಿರ್ಬಂಧ ಆದೇಶಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಸರ್ಕಾರವು ಖಾತೆ ನಿರ್ಬಂಧಕ್ಕೆ ಕಾರಣಗಳನ್ನು ತಡೆಹಿಡಿಯಬಹುದೇ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್‌ ಬುಧವಾರ ಪ್ರಶ್ನಿಸಿದೆ.
Published on

ಬೆಂಗಳೂರು: ವೈಯಕ್ತಿಕ ಖಾತೆ ನಿರ್ಬಂಧ ಆದೇಶಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಸರ್ಕಾರವು ಖಾತೆ ನಿರ್ಬಂಧಕ್ಕೆ ಕಾರಣಗಳನ್ನು ತಡೆಹಿಡಿಯಬಹುದೇ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್‌ ಬುಧವಾರ ಪ್ರಶ್ನಿಸಿದೆ.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021 ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಹಿಂದೆ ಟ್ವಿಟರ್‌) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಇಂಟರ್ನೆಟ್‌ನಲ್ಲಿನ ಮಾಹಿತಿಯು ಸಾರ್ವಜನಿಕ ಹಿತಾಸಕ್ತಿ ಅಥವಾ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದೆಯೇ ಎಂಬುದು ಚರ್ಚಾರ್ಹ ವಿಚಾರ ಎಂದು ಸುಪ್ರೀಂ ಕೋರ್ಟ್‌ ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ಹೇಳಿದೆ ಎಂದು ಹೈಕೋರ್ಟ್‌ ಹೇಳಿತು. ಈ ಆಧಾರದಲ್ಲಿ ಇಂಟರ್ನೆಟ್‌ನಲ್ಲಿನ ಮಾಹಿತಿಯನ್ನು ನಿರ್ಬಂಧಿಸಲು ಆದೇಶಿಸಿ ಅದಕ್ಕೆ ಸಂಬಂಧಿಸಿದ ಕಾರಣವನ್ನು ತಿಳಿಸಲು ಸರ್ಕಾರ ಹಿಂದೆ ಸರಿಯಬಹುದೇ ಎಂದು ಪೀಠ ಪ್ರಶ್ನಿಸಿತು.

“ಮಾಹಿತಿಯು ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆಯೇ ಎಂಬುದು ಚರ್ಚಾರ್ಹ ವಿಚಾರ. ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಬಹುದು ಎಂದಿದೆ. ಸರ್ವೋಚ್ಚ ನ್ಯಾಯಾಲಯವೇ ಅದನ್ನು ಪ್ರಶ್ನಿಸಬಹುದು ಎಂದಿರುವಾಗ ಏಕಸದಸ್ಯ ಪೀಠವು ಕಾರಣ ತಡೆಹಿಡಿಯಬಹುದು ಎಂದು ಹೇಗೆ ಹೇಳಬಹುದು” ಎಂದು ಪ್ರಶ್ನಿಸಿತು.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು ನಿರ್ಬಂಧ ಆದೇಶ ಮಾಡಿದಾಗ ಅದಕ್ಕೆ ಕಾರಣ ನೀಡಬೇಕು. ಐಟಿ ಕಾಯಿದೆ ಸೆಕ್ಷನ್‌ 69ಎ ಅಡಿ ಕಾರಣ ತಿಳಿಸುವಂತಿಲ್ಲ ಎಂದು ಏಕಸದಸ್ಯ ಪೀಠ ಹೇಗೆ ಹೇಳುತ್ತದೆ” ಎಂದರು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಆರ್‌ ಶಂಕರನಾರಾಯಣನ್‌ ಅವರು ಕಾರಣಗಳು ಎಕ್ಸ್‌ ಕಾರ್ಪ್‌ಗೆ ಗೊತ್ತಿವೆ. ಆದರೆ, ಅವರು ಬಯಸಿದ ರೀತಿಯಲ್ಲಿ ಸಂವಹನ ನಡೆದಿಲ್ಲ… ನಾವು ನೋಟಿಸ್‌ ನೀಡಿದಾಗ ಅವರು ಖಾತೆದಾರರಿಗೆ ತಿಳಿಸಬೇಕಿತ್ತು” ಎಂದು ಆಕ್ಷೇಪಿಸಿದರು.

ನ್ಯಾಯಾಲಯ ಹಾಗೂ ಎಕ್ಸ್‌ ಕಾರ್ಪ್‌ ಹಿಂದಿನ ವಿಚಾರಣೆಯಲ್ಲಿ ಸಲಹೆ ನೀಡಿದಂತೆ ನಿರ್ಬಂಧ ಆದೇಶಗಳನ್ನು ಪುನರ್‌ ಪರಿಗಣಿಸುವುದಿಲ್ಲ ಎಂದು ತಿಳಿಸಿದರು. ಮೇಲ್ಮನವಿಯ ವಿಚಾರಣೆ ನಡೆಸಿ, ಅರ್ಜಿ ಇತ್ಯರ್ಥಪಡಿಸಬಹುದು ಎಂದು ಪೀಠಕ್ಕೆ ತಿಳಿಸಿದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 9ಕ್ಕೆ ಮುಂದೂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com