ಬೆಂಗಳೂರು: ಸ್ನೇಹಿತರ ಜೊತೆಗೂಡಿ ಅಪಹರಣ ನಾಟಕ; ಹಣಕ್ಕೆ ಬೇಡಿಕೆ ಇಟ್ಟಿದ್ದ ವ್ಯಕ್ತಿ ಸೇರಿ ಮೂವರ ಬಂಧನ

ತನ್ನನ್ನು ಅಪಹರಣ ಮಾಡಲಾಗಿದ್ದು, ಅಪಹರಣಕಾರರಿಗೆ 2 ಲಕ್ಷ ರೂಪಾಯಿ ನೀಡುವಂತೆ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಲೀಕರಿಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನನ್ನು ಅಪಹರಣ ಮಾಡಲಾಗಿದ್ದು, ಅಪಹರಣಕಾರರಿಗೆ 2 ಲಕ್ಷ ರೂಪಾಯಿ ನೀಡುವಂತೆ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಲೀಕರಿಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನೂರುಲ್ಲಾ ಖಾನ್ ಮತ್ತು ಆತನ ಸ್ನೇಹಿತರನ್ನು ಮಂಡ್ಯದಲ್ಲಿ ಪತ್ತೆಹಚ್ಚಲಾಗಿದ್ದು, ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಖಾನ್ ಸುಲಭವಾಗಿ ಹಣ ಸಂಪಾದಿಸಲು ಇಬ್ಬರು ಸ್ನೇಹಿತರ ಜೊತೆಗೂಡಿ ತನ್ನನ್ನು ಅಪಹರಣ ಮಾಡಲಾಗಿದೆ ಎಂದು ನಾಟಕವಾಡಿದ್ದಾನೆ.

ಖಾನ್ ಕಳೆದ ಐದಾರು ವರ್ಷಗಳಿಂದ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮಾಲೀಕರು ಆತನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿ, ಮಾಲೀಕನಿಗೆ ವಂಚಿಸಿ ಸುಲಭವಾಗಿ ಹಣ ಗಳಿಸಲು ಖಾನ್ ನಿರ್ಧರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಲೀಸರ ಪ್ರಕಾರ, ಖಾನ್ ತನ್ನ ಮಾಲೀಕನಿಗೆ ಕರೆ ಮಾಡಿ, ಕ್ಯಾಬ್‌ನಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ತನ್ನನ್ನು ಅಪಹರಿಸಿದೆ ಮತ್ತು ತನ್ನನ್ನು ಬಿಡುಗಡೆ ಮಾಡಲು ಅಪಹರಣಕಾರರು ಎರಡು ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಎಂದು ಹೇಳಿದ್ದಾನೆ.

ಖಾನ್ ಸುರಕ್ಷತೆ ಬಗ್ಗೆ ಕಳವಳಗೊಂಡ ಮಾಲೀಕರು ಸೆಪ್ಟೆಂಬರ್ 27 ರಂದು ಆರ್‌ಟಿ ನಗರ ಪೊಲೀಸರಿಗೆ ದೂರು ನೀಡಿ, ಖಾನ್‌ನಿಂದ ಕರೆ ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಲೀಕರು ತಾವು ಹಣ ನೀಡಲು ಸಿದ್ಧರಿದ್ದು, ಖಾನ್ ಸುರಕ್ಷಿತವಾಗಿ ಬಿಡುಗಡೆಯಾಗಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಅಪಹರಣದ ಬಗ್ಗೆ ಅನುಮಾನಗೊಂಡ ಪೊಲೀಸರು ಖಾನ್ ಫೋನ್ ಮೇಲೆ ನಿಗಾ ವಹಿಸಿದ್ದರು. ನಂತರ ಅವರು ಇರುವ ಸ್ಥಳವನ್ನು ಪತ್ತೆಹಚ್ಚಿ, ಖಾನ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಅದೇ ದಿನ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com