ಹಾಸನ: ಹೇಮಾವತಿ ನದಿಗೆ ಹಾರಿ ಸಿವಿಲ್ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು

ಹೊಳೆನರಸೀಪುರ ಬಳಿ ಹೇಮಾವತಿ ನದಿಗೆ ಹಾರಿ ಸಿವಿಲ್ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಹೊಳೆನರಸೀಪುರ ಬಳಿ ಹೇಮಾವತಿ ನದಿಗೆ ಹಾರಿ ಸಿವಿಲ್ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.

79 ವರ್ಷದ ಕೆ ಸತ್ತಾರ್ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರರಾಗಿದ್ದಾರೆ. ವೈಯಕ್ತಿಕ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆಗಳಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರು ಹೇಳಿದ್ದಾರೆ.

ಇತ್ತೀಚೆಗೆ ಸತ್ತಾರ್ ಅವರು ತೆರೆದ ಹೃದಯ ಹಾಗೂ ಮೊಣಕಾಲುಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆಂದು ತಿಳಿಸಿದ್ದಾರೆ.

ಸತ್ತಾರ್ ಅವರು 10 ವರ್ಷಗಳ ಹಿಂದೆ ಪಿಡಬ್ಲ್ಯುಡಿಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದರು. ಮೈಸೂರಿನ ಸುರೇಶ್ ಎಂಬುವವರಿಗೆ 80 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆದರೆ, ಸುರೇಶ್ ಸಾಲ ಪಡೆದು ಮರುಪಾವತಿ ಮಾಡಿರಲಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ನೊಂದು ಆತ್ಮಹತ್ಯೆಗ ಶರಣಾಗಿದ್ದಾರೆಂದು ಅಧಿಕಾರಿಘಳು ತಿಳಿಸಿದ್ದಾರೆ.

ಸತ್ತಾರ್ ಅವರು ಕಾಣದ ಹಿನ್ನೆಲೆಯಲ್ಲಿ ಅವರ ಪುತ್ರ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದು, ದೂರು ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಸತ್ತಾರ್ ಸೇತುವೆಯ ಮೇಲೆ ನಡೆದು ಹೋಗಿ ನದಿಗೆ ಹಾರುತ್ತಿರುವ ದೃಶ್ಯ ಕಂಡು ಬಂದಿದೆ. ಸತ್ತಾರ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಇದೀಗ ಮೃತದೇಹ ಹೊರ ತೆಗೆಯಲು ಪೊಲೀಸರು ಈಜುಗಾರರನ್ನು ನಿಯೋಜನೆಗೊಳಿಸಿದ್ದು, ಹುಡುಕಾಟ ಶುರುವಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com