
ರಾಮನಗರ: ಆ್ಯಸಿಡ್‌ನಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಲು ಮುಂದಾದ ವಿದ್ಯಾರ್ಥಿನಿಯೊಬ್ಬಳು ಶನಿವಾರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಸಂತ್ರಸ್ತೆಯನ್ನು ಮಾಗಡಿ ತಾಲೂಕಿನ ತೂಬಿನಗೆರೆ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಒಂಬತ್ತು ವರ್ಷದ ಹೇಮಲತಾ ಎನ್ನಲಾಗಿದೆ. ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳಿಗೆ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮಾಡಿದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮುಖ್ಯಶಿಕ್ಷಕ ಸಿದ್ದಲಿಂಗಯ್ಯ ಮತ್ತು ಶಿಕ್ಷಕ ಬಸವರಾಜು ಸಂತ್ರಸ್ತೆಗೆ ಆ್ಯಸಿಡ್ ಮತ್ತು ಬ್ಲೀಚಿಂಗ್ ಪೌಡರ್ ನೀಡಿ ಶಾಲೆಯ ಶೌಚಾಲಯವನ್ನು ತೊಳೆಯುವಂತೆ ಹೇಳಿದ್ದರು ಎನ್ನಲಾಗಿದೆ.
ಮನೆಗೆ ಹಿಂದಿರುಗಿದ ನಂತರ, ವಿದ್ಯಾರ್ಥಿನಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಂತರ ಪೋಷಕರು ಆಕೆಯನ್ನು ಮಾಗಡಿ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ವಿಚಾರಿಸಿದಾಗ, ಶಾಲೆಯ ಶೌಚಾಲಯ ಸ್ವಚ್ಛಗೊಳಿಸುವಂತೆ ಶಿಕ್ಷಕರು ಒತ್ತಾಯಿಸಿದ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ವೈದ್ಯರ ಪ್ರಕಾರ, ಶೌಚಾಲಯವನ್ನು ಸ್ವಚ್ಛಗೊಳಿಸುವಾಗ ಆ್ಯಸಿಡ್ ಸ್ಪರ್ಶದಿಂದ ಬಾಲಕಿ ಅಸ್ವಸ್ಥಗೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ತಪ್ಪಿತಸ್ಥರನ್ನು ಅಮಾನತು ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
Advertisement