ಪರಿಸ್ಥಿತಿ ಉದ್ವಿಗ್ನ, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ: ಪ್ಯಾಲೆಸ್ತೀನ್‌ನಲ್ಲಿರುವ ಮಂಗಳೂರು ನರ್ಸ್

ನಾನಿರುವ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ನಮ್ಮ ನಗರ ಬಹುತೇಕ ನಿರ್ಜನವಾಗಿದೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್‌ನಲ್ಲಿರುವ ಮಂಗಳೂರು ನರ್ಸ್ ಥೆರೆಸಾ ಕ್ರಾಸ್ತಾ  ಹೇಳಿದ್ದಾರೆ.
ಥೆರೆಸಾ ಕ್ರಾಸ್ತಾ
ಥೆರೆಸಾ ಕ್ರಾಸ್ತಾ

ಮಂಗಳೂರು: ನಾನಿರುವ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ನಮ್ಮ ನಗರ ಬಹುತೇಕ ನಿರ್ಜನವಾಗಿದೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್‌ನಲ್ಲಿರುವ ಮಂಗಳೂರು ನರ್ಸ್ ಥೆರೆಸಾ ಕ್ರಾಸ್ತಾ  ಹೇಳಿದ್ದಾರೆ.

ಥೆರೆಸಾ ಕ್ರಾಸ್ತಾ ಅವರು ಬೆಥ್‌ಲೆಹೆಮ್‌ನಲ್ಲಿರುವ ಕ್ಯಾರಿಟಾಸ್ ಬೇಬಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಯುದ್ಧಪೀಡಿತ ಪ್ರದೇಶದಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ನಾನು ಇಸ್ರೇಲ್-ಪ್ಯಾಲೆಸ್ತೀನ್ ಗಡಿಗೆ ಸಮೀಪದಲ್ಲಿರುವ ಪ್ಯಾಲೆಸ್ಟೈನ್‌ನ ವೆಸ್ಟ್ ಬ್ಯಾಂಕ್‌ನಲ್ಲಿರುವ ಬೆತ್ಲೆಹೆಮ್ ನಗರದ ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಕ್ಟೋಬರ್ 7 ರಂದು ಜೆರುಸಲೆಮ್ ನಲ್ಲಿರುವ ಚರ್ಚ್‌ಗೆ ಭೇಟಿ ನೀಡಲಾಗಿತ್ತು. ಈ ವೇಳೆ ಹಮಾಸ್ ರಾಕೆಟ್ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಇಸ್ರೇಲ್‌ನಾದ್ಯಂತ ರೆಡ್ ಅಲರ್ಟ್ ಘೋಷಿಸುವ ಬಗ್ಗೆ ನಮಗೆ ಎಚ್ಚರಿಕೆ ನೀಡಲಾಯಿತು, ಇದರಿಂದಾಗಿ ನನ್ನ ನಗರಕ್ಕೆ ಹೇಗೆ ತೆರಳುವುದು ಎಂಬುದರ ಕುರಿತು ಚಿಂತಿತಳಾಗಿದ್ದೆ. ಅದೃಷ್ಟವಶಾತ್, ಶನಿವಾರ ಮಧ್ಯಾಹ್ನದವರೆಗೆ ಬಸ್ ಸೇವೆಗಳು ಲಭ್ಯವಿದ್ದವು. ಇಸ್ರೇಲ್-ಪ್ಯಾಲೆಸ್ಟೈನ್ ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳನ್ನು ಇನ್ನೂ ಸಂಪೂರ್ಣವಾಗಿ ಮುಚ್ಚಲಾಗಿಲ್ಲ. ಸುರಕ್ಷಿತವಾಗಿ ಬೆಥ್ಲೆಹೆಮ್‌ಗೆ ಮರಳಬಹುದಾಗಿದೆ. ಚೆಕ್ ಪೋಸ್ಟ್ ಸಂಪೂರ್ಣ ಮುಚ್ಚಿದ್ದಿದ್ದರೆ, ನಾನು ಜೆರುಸಲೆಮ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದೆ ಎಂದು ಮಂಗಳೂರು-ಕಾಸರಗೋಡು ಗಡಿಯ ಬೇಳ ಗ್ರಾಮದ ನಿವಾಸಿ ಥೆರೆಸಾ ಕ್ರಾಸ್ತಾ ಹೇಳಿದ್ದಾರೆ.

ಹಮಾಸ್ ದಾಳಿಯ ನಂತರ, ಇಸ್ರೇಲ್ ಪ್ಯಾಲೆಸ್ಟೈನ್‌ಗೆ ಹೋಗುವ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದೆ. ಬೆಥ್‌ಲೆಹೆಮ್ ನಗರ ಮತ್ತು ಪ್ಯಾಲೆಸ್ಟೀನಿಯನ್ ನಿಯಂತ್ರಣದಲ್ಲಿರುವ ಇತರ ಪ್ರದೇಶಗಳ ಚೆಕ್‌ಪೋಸ್ಟ್‌ಗಳನ್ನೂ ಮುಚ್ಚಲಾಗಿದ್ದು, ಇಸ್ರೇಲ್‌ಗೆ ಜನರ ಚಲನೆಯನ್ನು ನಿರ್ಬಂಧಿಸಲಾಗಿದೆ.

ಸಾವಿರಾರು ಪ್ಯಾಲೆಸ್ಟೀನಿಯನ್ನರು ದೈನಂದಿನ ಕೆಲಸಕ್ಕಾಗಿ ಇಸ್ರೇಲ್ ಅನ್ನು ಅವಲಂಬಿಸಿದ್ದಾರೆ, ಆದರೆ, ಯುದ್ಧವು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಸದಾಕಾಲ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ನಮ್ಮ ನಗರ ಬಹುತೇಕ ನಿರ್ಜನವಾಗಿದೆ. ನಾವಿರುವ ನಗರ ಗಾಜಾ ಬೆಥ್ ಲೆಹೆಮ್ ನಿಂದ ಕೇವಲ 74 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಬೆಥ್ ಲೆಹೆಮ್‌ನಲ್ಲಿ ಯುದ್ಧದ ನೇರ ಪರಿಣಾಮವಿಲ್ಲದಿದ್ದರೂ, ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ವೆಸ್ಟ್ ಬ್ಯಾಂಕ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಯುದ್ಧ ಮುಂದುವರಿದರೆ ನಮಗೆಲ್ಲರಿಗೂ ಸಂಕಷ್ಟ ಎದುರಾಗಲಿದೆ. ಯುದ್ಧದ ಪರಿಣಾಮ ಜನರು ಹೊರಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಶಾಲೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಪರಿಸ್ಥಿತಿ ಭಯಾನಕವಲ್ಲ. ಆದರೆ, ಉದ್ವಿಗ್ನವಾಗಿದೆ. ನಾವು ಮೊದಲಿನಂತೆ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com