ಕಾರವಾರ: ಕಳ್ಳತನ ಪ್ರಕರಣದಲ್ಲಿ 15 ದಿನಗಳ ಜೈಲು ಶಿಕ್ಷೆ ವಿಧಿಸಿದ್ದ ಕೆಳ ನ್ಯಾಯಾಲಯದ ಆದೇಶದ ಪ್ರಶ್ನಿಸಿದ್ದ ಆರೋಪಿಗೆ ಉನ್ನತ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2017ರಲ್ಲಿ ಶಿರಸಿ ತಾಲೂಕಿನ ಹಳದಹಳ್ಳಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಅಸ್ಗರ್ ಅಲಿ ಖಾಸಿಂ ಸಾಬ್ ಬಂಧಿತನಾಗಿದ್ದ. 2021ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು 15 ದಿನಗಳ ಜೈಲು ಶಿಕ್ಷೆ ಹಾಗೂ 500 ರೂ. ದಂಡ ವಿಧಿಸಿತ್ತು.
ಆದರೆ, ಖಾಸಿಂ ಸಾಬ್ ಈ ಆದೇಶ ಪ್ರಶ್ನಿಸಿ ಜಿಲ್ಲಾ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ಆರೋಪಿಗೆ 7 ವರ್ಷ ಶಿಕ್ಷೆ ವಿಧಿಸಿದ್ದು, ರೂ.1000 ದಂಡ ಕಟ್ಟುವಂತೆ ಆದೇಶಿಸಿದೆ.
2017ರ ಜುಲೈ 31ರಂದು ಹಳದಹಳ್ಳಿಯಲ್ಲಿರುವ ಸೀತಾರಾಮ ಪರಮೇಶ್ವರ ಹೆಗಡೆ ಎಂಬುವವರ ಮನೆಗೆ ನುಗ್ಗಿದ್ದ ಆರೋಪಿ ಖಾಸಿಂ ಸಾಬ್, ಮನೆಯಲ್ಲಿದ್ದ ಮೊಬೈಲ್, ಬ್ಯಾಗ್ , ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ, ಪರಾರಿಯಾಗಿದ್ದ.
ಪರಮೇಶ್ವರ ಹೆಗಡೆ ನೀಡಿದ ದೂರಿನ ಮೇರೆಗೆ ಶಿರಸಿ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡು ಖಾಸಿಂ ಸಾಬ್‌ನನ್ನು ಬಂಧನಕ್ಕೊಳಪಡಿಸಿದ್ದರು.
Advertisement