ಸಿಲಿಂಡರ್ ಸ್ಫೋಟ, ಭಾರಿ ಬೆಂಕಿ; ಪ್ರಾಣ ರಕ್ಷಣೆಗೆ 4ನೇ ಅಂತಸ್ತಿನಿಂದ ಜಿಗಿದ ವ್ಯಕ್ತಿ ಗಂಭೀರ: ಇಷ್ಟಕ್ಕೂ ಆಗಿದ್ದೇನು?

ಬೆಂಗಳೂರಿನ ಕೆಫೆಯಲ್ಲಿ ನಡೆದ ಭಾರಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಮತ್ತಷ್ಟು ರೋಚಕ ಮಾಹಿತಿ ಲಭ್ಯವಾಗಿದ್ದು, ಕೆಫೆಯಲ್ಲಿದ್ದ ಬರೊಬ್ಬರಿ 4 ಸಿಲಿಂಡರ್ ಗಳು ಏಕಕಾಲದಲ್ಲಿ ಸ್ಫೋಟಿಸಿದ್ದರಿಂದ ಬೆಂಕಿ ತೀವ್ರ ವ್ಯಾಪಕವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಡ್ ಪೈಪ್ ಕೆಫೆಯಲ್ಲಿ ಭಾರಿ ಅಗ್ನಿಅವಘಡ
ಮಡ್ ಪೈಪ್ ಕೆಫೆಯಲ್ಲಿ ಭಾರಿ ಅಗ್ನಿಅವಘಡ

ಬೆಂಗಳೂರು: ಬೆಂಗಳೂರಿನ ಕೆಫೆಯಲ್ಲಿ ನಡೆದ ಭಾರಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಮತ್ತಷ್ಟು ರೋಚಕ ಮಾಹಿತಿ ಲಭ್ಯವಾಗಿದ್ದು, ಕೆಫೆಯಲ್ಲಿದ್ದ ಬರೊಬ್ಬರಿ 4 ಸಿಲಿಂಡರ್ ಗಳು ಏಕಕಾಲದಲ್ಲಿ ಸ್ಫೋಟಿಸಿದ್ದರಿಂದ ಬೆಂಕಿ ತೀವ್ರ ವ್ಯಾಪಕವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಗ್ನೇಯ ಬೆಂಗಳೂರಿನ ಕೆಫೆಯೊಂದರಲ್ಲಿ ಬುಧವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಹಲವು ವಾಹನಗಳಿಗೆ ಹಾನಿಯಾಗಿದೆ. ಗ್ಯಾಸ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಬೆಂಕಿ ಇಡೀ ಕಟ್ಟಡವನ್ನು ವ್ಯಾಪಿಸಿದೆ. ಕೋರಮಂಗಲದ ಮುಡ್ಪೈಪ್ ಕೆಫೆ ಮತ್ತು ಹುಕ್ಕಾಬಾರ್‌ನಲ್ಲಿ 13ಕ್ಕೂ ಹೆಚ್ಚು ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿತ್ತು. ಈ ವೇಳೆ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.

ಪೊಲೀಸರ ಪ್ರಕಾರ ಬೆಂಕಿ ಹೊತ್ತಿಕೊಂಡಾಗ ಕೆಫೆಯಲ್ಲಿ ಗ್ರಾಹಕರು ಇರಲಿಲ್ಲ. ಕೆಫೆಯ ಕೆಳಗಿರುವ ಜಿಮ್ ಅನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಇದೇ ಮಹಡಿಯಲ್ಲಿ ಕಾರ್ ಶೋರೂಮ್ ಇದ್ದು ಇದರ ನೆಲ ಮತ್ತು ಮೊದಲ ಮಹಡಿಯಲ್ಲಿದ್ದ ಕೆಲ ಕಾರುಗಳಿಗೂ ಬೆಂಕಿಯಿಂದ ಹಾನಿಯಾಗಿದೆ. ಶೋರೂಂ ನಲ್ಲಿ ನಿಲುಗಡೆ ಮಾಡಲಾಗಿದ್ದ ಐದು ದ್ವಿಚಕ್ರ ವಾಹನಗಳು ಕೂಡ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾರುಗಳು ಭಾಗಶಃ ಜಖಂಗೊಂಡಿದೆ.

ಬೆಳಗ್ಗೆ 11.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಬೆಂಕಿ ಅವಘಡ ಕುರಿತು ಅಗ್ನಿಶಾಮಕ ಇಲಾಖೆಯು 12:08 ಕ್ಕೆ ಕರೆ ಸ್ವೀಕರಿಸಿದೆ ಮತ್ತು ತಕ್ಷಣ ಎಂಟು ಅಗ್ನಿಶಾಮಕ ಟೆಂಡರ್‌ಗಳನ್ನು ಸೇವೆಗೆ ರವಾನಿಸಲಾಯಿತು. ಘಟನೆ ವೇಳೆ ಕೆಫೆ ಇನ್ನೂ ವ್ಯಾಪಾರಕ್ಕಾಗಿ ತೆರೆದಿರಲಿಲ್ಲ ಮತ್ತು ನೇಪಾಳದಿಂದ ಬಂದ ಅಡುಗೆಯವರು ಮಾತ್ರ ಕೆಲಸ ಮಾಡುತ್ತಿದ್ದರು. ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಇಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯವ ಪ್ರೇಮ್ ಸಿಂಗ್ ಸೌದ್ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ.

ಬೆಂಕಿ ಕೆನ್ನಾಲಿಗೆ ವ್ಯಾಪಕವಾಗುತ್ತಿದ್ದಂತೆಯೇ ಸೌದ್ ಬೆಂಕಿಯಿಂದ ಪಾರಾಗಲು ಕಟ್ಟಡದಿಂದ ಜಿಗಿದಿದ್ದಾನೆ. ಆದರೆ, ಆತನನ್ನು ರಕ್ಷಿಸಲು ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಕಾರಣ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ತಕ್ಷಣ ಅತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕೆಜಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಗಾಯಾಳು ಪ್ರೇಮ್​ ಕುಮಾರ್​ ಅಪೋಲೋ ಆಸ್ಪತ್ರೆಗೆ ಸ್ಥಳಾಂತರ
ತಿಲಕ್ ನಗರದ ಕೆಜಿ ಆಸ್ಪತ್ರೆಯ ಡಾ.ಹರೀಶ್​​​​ ಮಾತನಾಡಿ, ಗಾಯಾಳು ಪ್ರೇಮ್​ ಕುಮಾರ್​ಗೆ ಹೆಚ್ಚುವರಿ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಗಾಯಾಳು ಪ್ರೇಮ್​ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕೈ ಮೂಳೆ ಮುರಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಎಂಆರ್​ಐ ಇಲ್ಲ ಹೀಗಾಗಿ ಅಪೋಲೋ ಆಸ್ಪತ್ರೆಗೆ ಕಳಿಸಿದ್ದೇವೆ ಎಂದರು. ಗಾಯಾಳು ಪ್ರೇಮ್​​​ ಸಹೋದರ ಮಾತನಾಡಿ, ನಾವೆಲ್ಲಾ ನೇಪಾಳದವರು, ಪ್ರೇಮ್​ ನನ್ನ ಸಹೋದರ. ರೆಸ್ಟೋರೆಂಟ್​ನಲ್ಲಿ ನಾವೆಲ್ಲಾ 15 ಜನ ಕೆಲಸ ಮಾಡುತ್ತಿದ್ದೆವು. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರೇಮ್ ಫೋನ್ ಮಾಡಿದ್ದ ಎಂದು ಹೇಳಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ
ಅಗ್ನಿ ಅವಘಡ ಕುರಿತಾಗಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ರೆಸ್ಟೋರೆಂಟ್​ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಒಬ್ಬರಿಗೆ ಕಾಲು, ಕೈಗೆ ಗಾಯವಾಗಿದೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ನಾನು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಏಕಕಾಲದಲ್ಲಿ ಸಿಡಿದ ಸಿಲಿಂಡರ್ ಗಳು
ಇನ್ನು ಕೆಲವೇ ಸೆಕೆಂಡ್‌ಗಳಲ್ಲಿ ಮೂರು ಸಿಲಿಂಡರ್‌ಗಳು ಸಿಡಿದಿದ್ದರಿಂದ ಶಬ್ದ ತೀವ್ರವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಹೀಗಿ ಸಿಡಿದ ಒಂದು ಸಿಲಿಂಡರ್ ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದೆ. ಆದರೆ ಅದೃಷ್ಟವಶಾತ್ ಅಲ್ಲಿ ಯಾರೂ ಇರಲಿಲ್ಲ. ಹೊಸೂರು ಮುಖ್ಯರಸ್ತೆಯಲ್ಲಿ ಕರ್ತವ್ಯ ನಿರತ ಪೊಲೀಸರು ಕ್ಷಿಪ್ರವಾಗಿ ಪರಿಸ್ಥಿತಿಯನ್ನು ನಿಭಾಯಿಸಿ ಜಿಮ್‌ಗೆ ಸಂಬಂಧಿಸಿದ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಕಟ್ಟಡದೊಳಗೆ ಇರುವ ಜಿಮ್ ಮತ್ತು ತರಬೇತಿ ಸಂಸ್ಥೆಗೆ ಬೆಂಕಿಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಈ ಬಗ್ಗೆ ಮಾತನಾಡಿರುವ ದಾರಿಹೋಕ ವಿದ್ಯಾರ್ಥಿಯೊಬ್ಬರು, "ನಾವು ಕಾಲೇಜಿಗೆ ಹೋಗಲು ಪ್ರತಿ ದಿನವೂ ಅದೇ ದಾರಿಯಲ್ಲಿ ನಡೆಯುತ್ತೇವೆ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವೈರಲ್ ಆದ ನಂತರ ಪರಿಸ್ಥಿತಿಯನ್ನು ವೀಕ್ಷಿಸಲು ಬಂದಿದ್ದೇವೆ" ಎಂದು ಹೇಳಿದರು. ಇದೇ ವಿಚಾರವಾಗಿ TNIE ಯೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ) ರಾಮನ್ ಗುಪ್ತಾ ಅವರು, ಬೆಂಕಿ ಅವಘಡದ ಕಾರಣವನ್ನು ಕಂಡುಹಿಡಿಯಲು ಪ್ರತ್ಯೇಕ ತಂಡವನ್ನು ರಚಿಸಲಾಗುವುದು ಮತ್ತು ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಪೊಲೀಸ್ ಪ್ರಕರಣ ದಾಖಲು
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಡ್​​ ಪೈಪ್ ಕೆಫೆ ಮಾಲೀಕ ಕರಣ್ ಜೈನ್ ವಿರುದ್ಧ ಎಸ್​.ಜಿ.ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com