ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎದುರಾಗುತ್ತಲೇ ಇದ್ದು, ಈ ನಿಟ್ಟಿನಲ್ಲಿ ಕಡಿಮೆ ಮಳೆಯಾದಾಗ ಕಡಿಮೆ ನೀರು ಬಳಸಿ ಯಾವ ರೀತಿಯ ಬೆಳೆಗಳನ್ನು ಬೆಳೆಯಬಹುದು, ಬೆಳೆ ಹಾನಿಯನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಆಹಾರ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರವಹಿಸುತ್ತವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯು ಗುಣಾತ್ಮಕವಾಗಬೇಕು ಮತ್ತು ಆಹಾರ ಉತ್ಪಾದನೆಯನ್ನು ಹೆಚ್ಚಿಸಬೇಕು. ಕರ್ನಾಟಕವು ಅತಿ ಹೆಚ್ಚು ಒಣ ಕೃಷಿ ಭೂಮಿಯನ್ನು ಹೊಂದಿದ್ದು, ಹವಾಮಾನ ಬದಲಾವಣೆಯಿಂದಾಗಿ ನಿರಂತರವಾಗಿ ಅತಿವೃಷ್ಟಿ ಮತ್ತು ಅನಾವೃಷ್ಟಿಯನ್ನು ಎದುರಿಸುತ್ತಿದೆ, ಈ ನಿಟ್ಟಿನಲ್ಲಿ ಕೃಷಿ ವಿವಿಗಳು ಬೆಳೆಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಬೇಕು ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾನಿಲಯಗಳು ರೈತರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಲ್ಯಾಬ್‌ನಿಂದ ಭೂಮಿ ಮತ್ತು ಭೂಮಿಯಿಂದ ಲ್ಯಾಬ್ ಪರಿಕಲ್ಪನೆಗಳ ಆಧಾರದ ಮೇಲೆ ವೈಜ್ಞಾನಿಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಹೊಸ ತಳಿಗಳು ರೈತರಿಗೆ ತಲುಪಿವೆಯೇ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರೈತರ ಆದಾಯ ಹೆಚ್ಚಿಸಲು ಕೃಷಿ ವಿಶ್ವವಿದ್ಯಾಲಯಗಳು ಸರ್ಕಾರದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.