ಅರಣ್ಯ ಇಲಾಖೆ ಭೂಮಿ ಪರಿವರ್ತನೆ: ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು

ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿದ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿದ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.

ಅಕ್ಟೋಬರ್ 17 ರಂದು ಸಹಾಯಕ ಕಮಿಷನರ್ (ಎಸಿ) ಎಂ.ಜಿ.ಶಿವಣ್ಣ ಮತ್ತು ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಅರಣ್ಯಾಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು ಉತ್ತರದ ಯಲಹಂಕದ ಕೊತ್ತನೂರು ಗ್ರಾಮದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 17.34 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಡಿಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೂನ್ 2023 ರಲ್ಲಿ ಅಜಿತ್ ಕುಮಾರ್ ರೈ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ರೈ ಅವರನ್ನು ಬಂಧನಕ್ಕೊಳಪಡಿಸಿದ್ದರು.

ದಾಳಿ ವೇಳೆ ಲೋಕಾಯುಕ್ತ ಪೊಲೀಸರು 100 ಎಕರೆ ಜಮೀನು, 2.5 ಕೋಟಿ ಮೌಲ್ಯದ ಎಸ್‌ಯುವಿ ಹಾಗೂ 2 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆಗಳನ್ನು ಪತ್ತೆ ಮಾಡಿದ್ದರು.

ಅಕ್ಟೋಬರ್ 14 ರಂದು ಹಲಸೂರು ಗೇಟ್ ಪೊಲೀಸರು ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯ 14.19 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆಂದು ಶಿವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಶಿವಣ್ಣ ವಿರುದ್ಧ ದೂರು ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದೇವೆ. ಈ ಇಬ್ಬರು ಅಧಿಕಾರಿಗಳು ಭಾರತಿ ನಗರದಲ್ಲಿನ ಅರಣ್ಯ ಭೂಮಿಯನ್ನು ನೇರವಾಗಿ ಪರಿವರ್ತನೆ ಮಾಡಿರುವುದು ಕಂಡು ಬಂದಿತ್ತು. ಅರಣ್ಯ ಸಂರಕ್ಷಣಾ ಕಾಯಿದೆ 1963 ಮತ್ತು ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಒಪ್ಪಿಗೆಯಿಲ್ಲದೆ ಅರಣ್ಯೇತರ ಉದ್ದೇಶಗಳಿಗಾಗಿ ಯಾವುದೇ ಅರಣ್ಯ ಭೂಮಿಯನ್ನು ನೀಡಲಾಗುವುದಿಲ್ಲ ಎಂದು ಹೇಳುವ ಸುಪ್ರೀಂ ಕೋರ್ಟ್ ಆದೇಶವನ್ನೂ ಇಬ್ಬರೂ ಉಲ್ಲಂಘಿಸಿದ್ದಾರೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

1984 ರಲ್ಲಿ ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, ಸರ್ವೆ ಸಂಖ್ಯೆ 47 ಮತ್ತು 48 ರಲ್ಲಿ ಕ್ರಮವಾಗಿ 17.34 ಎಕರೆ ಮತ್ತು 22.4 ಎಕರೆ ಅಳತೆಯ ಭೂಮಿಯನ್ನು ಅಂದಿನ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ನೀಡಿದ್ದರು,

2023 ರ ಜನವರಿಯಲ್ಲಿ, ರೈ ಅವರ ಮನವಿಯ ಮೇರೆಗೆ, ಶಿವಣ್ಣ 17.34 ಎಕರೆಯನ್ನು ಭೂಮಿಯನ್ನು ಪರಿವರ್ತನೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಕರ್ನಾಟಕದ ಇತರ ಭಾಗಗಳಲ್ಲಿ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದ ನಿದರ್ಶನಗಳಿವೆ, ಆದರೆ, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೆಎಎಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಇದೇ ಮೊದಲಾಗಿದೆ ಎಂದು ಹೇಳಿದ್ದಾರೆ.

ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅತಿಕ್ರಮಣ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಇದರಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com