ಬರ ಪರಿಸ್ಥಿತಿ: ಕೇಂದ್ರದಿಂದ 17,901.73 ಕೋಟಿ ರೂ. ಪರಿಹಾರ ಕೋರಿದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸ್ಪಂದಿಸಿ, ಸಂತ್ರಸ್ತ ರೈತರ ಸಂಕಷ್ಟವನ್ನು ನಿವಾರಿಸಲು ಕೇಂದ್ರದಿಂದ ರೂ. 17,901.73 ಕೋಟಿಗಳ ಪರಿಹಾರವನ್ನು ರಾಜ್ಯ ಸರ್ಕಾರ ಕೋರಿದೆ.
ಕೇಂದ್ರ ಕೃಷಿ ಕಾರ್ಯದರ್ಶಿ ಭೇಟಿ ಮಾಡಿದ ರಾಜ್ಯದ ನಿಯೋಗ
ಕೇಂದ್ರ ಕೃಷಿ ಕಾರ್ಯದರ್ಶಿ ಭೇಟಿ ಮಾಡಿದ ರಾಜ್ಯದ ನಿಯೋಗ

ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸ್ಪಂದಿಸಿ, ಸಂತ್ರಸ್ತ ರೈತರ ಸಂಕಷ್ಟವನ್ನು ನಿವಾರಿಸಲು ಕೇಂದ್ರದಿಂದ ರೂ. 17,901.73 ಕೋಟಿಗಳ ಪರಿಹಾರವನ್ನು ರಾಜ್ಯ ಸರ್ಕಾರ ಕೋರಿದೆ.

ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನೊಳಗೊಂಡ ನಿಯೋಗ ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿತು. ಈ ಸಭೆಗಳಲ್ಲಿ ಅವರು ರಾಜ್ಯದ ಭೀಕರ ಸ್ಥಿತಿಯ ಕುರಿತು ಸಮಗ್ರವಾದ ಮಾಹಿತಿ ‌ನೀಡಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಒಟ್ಟು ರೂ. 17,901.73 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿದ್ದೇವೆ, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸೆಪ್ಟೆಂಬರ್ 22 ರ ಹೊತ್ತಿಗೆ ರಾಜ್ಯವು ಶೇಕಡಾ 26 ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಇದರಿಂದ ಗಮನಾರ್ಹವಾದ ಕೃಷಿ ಮತ್ತು ತೋಟಗಾರಿಕಾ ನಷ್ಟವಾಗಿದ್ದು, ಮುಂಗಾರು (ಖಾರಿಫ್) ಋತುವಿನಲ್ಲಿ ಸರಿಸುಮಾರು 45.55 ಲಕ್ಷ ಹೆಕ್ಟೇರ್ ಗಳನ್ನು ಆವರಿಸಿದೆ. ಸರ್ಕಾರ ಇದುವರೆಗೆ 216 ತಾಲ್ಲೂಕುಗಳಲ್ಲಿ ಬರಗಾಲ ಎಂದು ಘೋಷಿಸಿದ್ದು, ನವೆಂಬರ್ ಆರಂಭದಲ್ಲಿ ಮುಂದಿನ ಘೋಷಣೆಗಳನ್ನು ಪರಿಗಣಿಸಲಾಗುವುದು ಎಂದರು. 

ಅಂದಾಜು ಪರಿಹಾರ ನಿಧಿಯಲ್ಲಿ ರೂ. 17,901 ಕೋಟಿಯಲ್ಲಿ, ರಾಜ್ಯ ಸರ್ಕಾರ ಮೊದಲ ಬಾರಿಗೆ 90 ದಿನಗಳ ಬರದಿಂದ ತೀವ್ರವಾಗಿ ಹಾನಿಗೊಳಗಾದ ಕುಟುಂಬಗಳಿಗೆ ರೂ. 12,577 ಕೋಟಿ ಪರಿಹಾರಕ್ಕಾಗಿ ಮನವಿ ಮಾಡಿದೆ. ಹೆಚ್ಚುವರಿಯಾಗಿ, ಈ ವರ್ಷ ಮುಂಗಾರು ಅವಧಿಯಲ್ಲಿ (ಜುಲೈ-ಜೂನ್) ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟಕ್ಕೆ ರೂ. 4,414.29 ಕೋಟಿ ವಿನಿಯೋಗಿಸಲಾಗಿದೆ. ಜೊತೆಗೆ ಸಂತ್ರಸ್ತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ನೆರವು ನೀಡಲು ರೂ.  355 ಕೋಟಿ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು. 

ಕರ್ನಾಟಕದಲ್ಲಿ ಬೆಳೆ ಹಾನಿಯಿಂದ ಆಗಿರುವ ಒಟ್ಟು ನಷ್ಟ ರೂ. 33,770.10 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ರೂ. 17,901.73 ಕೋಟಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್‌ಡಿಆರ್‌ಎಫ್) ಕೋರಲಾಗಿದೆ. ಪರಿಹಾರ ನಿಧಿಯನ್ನು ಅನುಮೋದಿಸುವಾಗ ರಾಜ್ಯದ ಜನಸಂಖ್ಯೆಯ ಶೇ.70 ರಷ್ಟಿರುವ ಸಣ್ಣ ಮತ್ತು ಅತಿಸಣ್ಣ ರೈತರ ಇತ್ತೀಚಿನ ಲೆಕ್ಕಾಚಾರದಲ್ಲಿ ಕೇಂದ್ರದ ಅಗತ್ಯವನ್ನು ಬೈರೇಗೌಡ ಒತ್ತಿ ಹೇಳಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ  ಕೇಂದ್ರ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿಯವರೊಂದಿಗಿನ ಪ್ರತ್ಯೇಕ ಸಭೆಯಲ್ಲಿ ರೂ.  600 ಕೋಟಿ ಮೊತ್ತದ ಎಂಜಿಎನ್‌ಆರ್‌ಇಜಿಎ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಚಾಲ್ತಿಯಲ್ಲಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಂಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸದ ಖಾತರಿಯ ಮಾನವ ದಿನಗಳ ಸಂಖ್ಯೆಯನ್ನು ಪ್ರಸ್ತುತ 13 ಕೋಟಿಯಿಂದ 18 ಕೋಟಿಗೆ ಹೆಚ್ಚಿಸುವಂತೆ ಅವರು ಕರೆ ನೀಡಿದರು.

ಮಂಜೂರಾದ 13 ಕೋಟಿ ಮಾನವ ದಿನಗಳ ಪೈಕಿ 10 ಕೋಟಿಯನ್ನು ಈಗಾಗಲೇ ಬಳಸಿಕೊಳ್ಳಲಾಗಿದ್ದು, ಬರಪೀಡಿತ ಪ್ರದೇಶಗಳಲ್ಲಿನ ನಿವಾಸಿಗಳ ಜೀವನಾಂಶಕ್ಕಾಗಿ ಹೆಚ್ಚುವರಿ ಕೆಲಸದ ದಿನಗಳು ಅತ್ಯಗತ್ಯ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಆದರೆ ಮುಂದಿನ 2-3 ತಿಂಗಳ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ, ಬರಪೀಡಿತ ತಾಲೂಕುಗಳಲ್ಲಿ ತುರ್ತು ನೀರಿನ ಅಗತ್ಯತೆಗಳಿಗೆ ಹಣದ ಅಗತ್ಯವಿದೆ ಎಂದು ಖರ್ಗೆ ಹೇಳಿದರು.

ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ, ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸವಾಲುಗಳ ಕುರಿತು ಚರ್ಚಿಸಿ ಅಗತ್ಯ ಮಾರ್ಪಾಡುಗಳನ್ನು ಕೋರಿದರು. ಮುಂದಿನ ದಿನಗಳಲ್ಲಿ ಶಿಫಾರಸು ಮಾಡಿದ ಬದಲಾವಣೆಗಳೊಂದಿಗೆ ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com