ರಾಮನಗರ ಬೆಂಗಳೂರಿಗೆ ಸೇರಿಸುವ ಪ್ರಸ್ತಾವನೆಯಿಂದ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಲಾಭ: ಡಿಕೆಶಿ ವಿರುದ್ಧ ವಿಪಕ್ಷಗಳ ಕಿಡಿ

ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಕುರಿತು ಪ್ರಸ್ತಾವನೆ ಮುಂದಿಟ್ಟ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ವಿರೋಧಪಕ್ಷಗಳು ಬುಧವಾರ ತೀವ್ರ ಕಿಡಿಕಾರಿದ್ದು, ಈ ಪ್ರಸ್ತಾವನೆ ಅವರ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರ್ಪಡೆಗೊಳಿಸುವ ಕುರಿತು ಪ್ರಸ್ತಾವನೆ ಮುಂದಿಟ್ಟ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ವಿರೋಧಪಕ್ಷಗಳು ಬುಧವಾರ ತೀವ್ರ ಕಿಡಿಕಾರಿದ್ದು, ಈ ಪ್ರಸ್ತಾವನೆ ಅವರ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿವೆ.

ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 110 ಗ್ರಾಮಗಳನ್ನು ಸೇರಿಸಿ 15 ವರ್ಷಗಳೇ ಕಳೆದಿವೆ, ಆದರೆ ಇಂದಿಗೂ ಉತ್ತಮ ರಸ್ತೆ ಮತ್ತು ನೀರು ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಡಿಕೆ.ಶಿವಕುಮಾರ್ ಮೊದಲು ಉದ್ಯಮಿ ನಂತರ ರಾಜಕಾರಣಿಯಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಹೇಳಿದ್ದಾರೆ.

‘ನಗರಾಭಿವೃದ್ಧಿ ಯೋಜನೆ ಕಳೆದ ಹತ್ತು ವರ್ಷಗಳಿಂದ ಬಾಕಿ ಉಳಿದಿದೆ. ಈಗ, ಸರ್ಕಾರವು ತನ್ನ ಅಭಿಲಾಷೆಗಳಿಗೆ ಅನುಗುಣವಾಗಿ ಹೊಸ ಪ್ರದೇಶಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ಅವುಗಳನ್ನು ಡೆವಲಪರ್‌ಗಳಿಗೆ ಮಾರಾಟ ಮಾಡುತ್ತದೆ. ತಮ್ಮ ಲಾಭಕ್ಕೆ ಅನುಗುಣವಾಗಿ ಹಳದಿ ಮತ್ತು ಹಸಿರು ವಲಯಗಳನ್ನು ಬದಲಿಸುತ್ತಿದ್ದಾರೆಂದು ಕಿಡಿಕಾರಿದರು.

ಈ ನಡುವೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದು, ಡಿಕೆ.ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ.

ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು; ಇಷ್ಟು ದಿನ ಶಾಸಕರಾಗಿ, ಸಚಿವರಾಗಿ ಉಪ ಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ  ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು.

ಕನಕಪುರಕ್ಕೆ 52 ಕೀ.ಮೀ. ದೂರದಲ್ಲಿದೆ ಬೆಂಗಳೂರು. 25 ಕೀ.ಮೀ. ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ.

2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿ.ಕೆ.ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು! ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ, ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ.. ಅದೇ ನಮ್ಮ ಪುಣ್ಯ ಎಂದು ವ್ಯಂಗ್ಯವಾಡಿದ್ದಾರೆ.

ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದೆ. ಆದರೆ, ಇದೇ ಮಹಾನುಭಾವರೇ ಮೈತ್ರಿ ಸರಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪ ಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ?

ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು  ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿ.ಕೆ.ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಸಾಧ್ಯವಿಲ್ಲ. ಇದನ್ನು ಡಿಕೆ.ಶಿವಕುಮಾರ್ ಅರಿತುಕೊಳ್ಳಬೇಕು. ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ, ಜೋಕೆ. ಒಡೆದು ಚೂರುಚೂರು ಮಾಡುವುದಕ್ಕೆ ರಾಮನಗರವೇನು ಕಲ್ಲುಬಂಡೆಯೇ? ಎಂದು ಪ್ರಶ್ನಿಸಿದ್ದಾರೆ.

"ಈ‌ ದೇಶಕ್ಕೆ ವಿದ್ಯಾವಂತರು ಅಲ್ಲದಿದ್ದರೂ, ಬುದ್ದಿವಂತರು ಅಲ್ಲದಿದ್ದರೂ ಪ್ರಜ್ಞಾವಂತರು ಬೇಕು. ನಾನು ಕುಮಾರಸ್ವಾಮಿ ಅವರನ್ನು ಪ್ರಜ್ಞಾವಂತರು ಅಂದುಕೊಂಡಿದ್ದೆ. ಅವರ ತಂದೆಯವರನ್ನು ಕೇಳಿ ತಿಳಿದುಕೊಳ್ಳಬೇಕು" ಎಂದು ದರ್ಪದ ಮಾತು ಹೇಳಿದ್ದಾರೆ ಡಿಸಿಎಂ. ವಿದ್ಯೆ, ಬುದ್ಧಿ ಇಲ್ಲದಿದ್ದರೆ ಪ್ರಜ್ಞಾವಂತರು ಹೇಗಾದಾರು? ಎನ್ನುವ ಸಾಮಾನ್ಯ ಜ್ಞಾನ ಅವರಿಗಿಲ್ಲ. ಅವರ ಪ್ರಜ್ಞಾವಂತಿಕೆ ಎಂಥಹುದು ಎಂಬುದು ಜನಜನಿತ.

ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ 'ದುಷ್ಟ'ಪ್ರಜ್ಞೆ, 'ಅತಿ' ಬುದ್ಧಿವಂತಿಕೆ, 'ಅಸಾಮಾನ್ಯ' ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ.

"ಕುಮಾರಸ್ವಾಮಿ ಏನೇನೋ ಹೇಳುತ್ತಾರೆ. ನನ್ನ ತಲೆಯಲ್ಲಿ ಏನೋ ಯೋಚನೆ ಇದೆ" ಎನ್ನುತ್ತಾರೆ ಡಿಸಿಎಂ. ಇಷ್ಟಕ್ಕೂ ಅವರ ತಲೆಯಲ್ಲಿ ಏನಿದೆ? ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ? ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದೇ? ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ.. ಎಲ್ಲವೂ ನಿಗೂಢ.

 ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ಕೊಪ್ಪಳ, ಗದಗ ಸೇರಿ ಅನೇಕ ಹೊಸ ಜಿಲ್ಲೆಗಳು ರಚನೆ ಆಗಿವೆ. ಅವೆಲ್ಲವನ್ನೂ ಸುಖಾಸುಮ್ಮನೆ ಮಾಡಲಾಯಿತೆ? ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಅಲ್ಲಿ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಯ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ? ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ? ಇನ್ನೆಷ್ಟನ್ನು ಕೂಡಿ ಹಾಕಬೇಕು?

ಕನಕಪುರದ ಅಭಿವೃದ್ಧಿ ಈಗ ನೆನಪಾಗಿದೆಯಾ? 1983ಕ್ಕೆ ಮೊದಲು ಇದೇ ಕನಕಪುರ, ಸಾತನೂರು ಹೇಗಿದ್ದವು? ರಾಮಕೃಷ್ಣ ಹೆಗಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಂದ ದೇವೇಗೌಡ ಅವರಿಗೆ, ಅಲ್ಲಿನ ಸ್ಥಿತಿ ಕಂಡು ಕಣ್ಣೀರು ಬಂತು. ಒಂದು ವಿದ್ಯುತ್‌ ಸಂಪರ್ಕ ಇರಲಿಲ್ಲ, ರಸ್ತೆ-ಚರಂಡಿ ಇರಲಿಲ್ಲ. ಕುಡಿಯಲು ನೀರು ಇರಲಿಲ್ಲ. ಆ ಪರಿಸ್ಥಿತಿಯನ್ನು ದೇವೇಗೌಡರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅಂದು ಲೋಕೋಪಯೋಗಿ, ಬೃಹತ್‌ ನೀರಾವರಿ ಮಂತ್ರಿಗಳಾಗಿದ್ದ ಅವರು ಕನಕಪುರ, ರಾಮನಗರಕ್ಕೆ ಕಾಯಕಲ್ಪ ನೀಡಿದರು, ಆ ದುಸ್ಥಿತಿಯನ್ನು ಬದಲಿಸಿದರು. ಅವರ ಕೆಲಸವನ್ನೇ ನಾನೂ ಮುಂದುವರಿಸಿದೆ. ನೀವೇನು ಮಾಡಿದ್ದೀರಿ ಡಿ.ಕೆ.ಶಿವಕುಮಾರ್‌ ರವರೇ..? ಬಡವರ ಜಮೀನಿಗೆ ಬೇಲಿ ಹಾಕಿದ್ದು, ಅಡ್ಡ ಬಂದವರ ಜೀವ ತೆಗೆದದ್ದು, ಕಲ್ಲುಬಂಡೆಗಳನ್ನು ಲೂಟಿ ಮಾಡಿದ್ದು, ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ? ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ?

ನಾಡಪ್ರಭು ಶ್ರೀ ಕೆಂಪೇಗೌಡರು, ಶ್ರೀ ಕೆಂಗಲ್‌ ಹನುಮಂತಯ್ಯನವರು, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ರಾಮನಗರದವರು ಎಂದು ನಿಮಗೆ ಈಗ ಜ್ಞಾನೋದಯ ಆಗಿದೆ. ಇಂಥ ಮಹಾಪುರುಷರು ಜನ್ಮತಳೆದ, ಅವರು ನಡೆದಾಡಿದ ನೆಲವನ್ನು ʼರಿಯಲ್‌ ಎಸ್ಟೇಟ್‌ ಪಾಪಕುಂಡʼವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್?‌ ಈ ಪುಣ್ಯಪರುಷರ ಹೆಸರು ಹೇಳುವ ನೈತಿಕತೆ ನಿಮಗೆ ಇದೆಯಾ? ರಾಮದೇವೇರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚಾನೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com