ಹುಲಿ ಉಗುರು ಪ್ರಕರಣ: ಅರಣ್ಯ ಇಲಾಖೆ ನೋಟಿಸ್ ರದ್ದು ಕೋರಿ ಹೈಕೋರ್ಟ್‌ ಕದ ತಟ್ಟಿದ ನಟ ಜಗ್ಗೇಶ್‌

ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ನೀಡಿರುವ ನೋಟಿಸ್‌ ಅನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್‌ ಅವರು ಗುರುವಾರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
ನಟ ಜಗ್ಗೇಶ್
ನಟ ಜಗ್ಗೇಶ್
Updated on

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ನೀಡಿರುವ ನೋಟಿಸ್‌ ಅನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್‌ ಅವರು ಗುರುವಾರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರಣ್ಯ ಇಲಾಖೆಯು 2023ರ ಅಕ್ಟೋಬರ್‌ 25ರಂದು ತನಗೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೇ, ಬೆಂಗಳೂರಿನ ತಮ್ಮ ಮನೆಗೆ ಧಾವಿಸಿದ 14 ಸದಸ್ಯರ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಯಲ್ಲಿ ಶೋಧ ನಡೆಸಿದ್ದಾರೆ. ಇದು ಅಕ್ರಮವಾಗಿದ್ದು, ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ಶೋಧನಾ ವಾರೆಂಟ್‌ನಿಂದ ಉದ್ಭವಿಸುವ ಮುಂದಿನ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಕೋರಿಕೆ ಮಾಡಲಾಗಿದೆ.

ಪ್ರತಿವಾದಿ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗಲು ಸಾಕಷ್ಟು ಕಾಲಾವಕಾಶ ನೀಡಿಲ್ಲ. ಮಾನವ ಕಣ್ತಪ್ಪಿನಿಂದ ಆಗುವ ನ್ಯಾಯಯುತ ಮತ್ತು ಉದ್ದೇಶಪೂರ್ವಕವಲ್ಲದ ತಪ್ಪನ್ನು ಸರಿಪಡಿಸಲು ಅವಕಾಶ ಮಾಡಿಕೊಟ್ಟಿಲ್ಲ. ಆಡಳಿತಾತ್ಮಕ ಮತ್ತು ಕಾನೂನು ಪ್ರಕ್ರಿಯೆಯಲ್ಲಿ ಪಕ್ಷಕಾರರನ್ನು ನ್ಯಾಯಯುತವಾಗಿ ಆಲಿಸಿ, ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹುಲಿಯ ಉಗುರನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ನೋಟಿಸ್‌ಗೆ ಉತ್ತರಿಸುವ ಮೊದಲೇ 14 ಅಧಿಕಾರಿಗಳ ತಂಡವು ಸಂಸದನಾಗಿ ತನ್ನ ಕಸ್ಟಡಿಯಲ್ಲಿರುವ ದಾಖಲೆಗಳನ್ನು ಚೆಲ್ಲಾಡಿರುವುದೂ ಸೇರಿದಂತೆ ಇಡೀ ಮನೆಯಲ್ಲಿ ದಾಂದಲೆ ಸೃಷ್ಟಿಸಿದೆ. ಶೋಧ ಮತ್ತು ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಬಲವಂತಾಗಿ ಹೇಳಿಕೆ ದಾಖಲಿಸಿಕೊಂಡಿದ್ದು, ಪೆಂಡೆಂಟ್‌ ಪಡೆದು ಹೋಗಿದ್ದಾರೆ. ಇಡೀ ಪ್ರಕ್ರಿಯೆಯು ದುರುದ್ದೇಶಪೂರ್ವಕವಾಗಿದ್ದು, ಸಂವಿಧಾನದ 21ನೇ ವಿಧಿಗೆ ವಿರುದ್ಧ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅನ್ವಯ ಅರ್ಜಿದಾರರಿಗೆ ಪ್ರಾಣಿಯ ವಸ್ತುಗಳನ್ನು ಸಲ್ಲಿಸಲು ಸೂಚಿಸಿದ ಮೇಲೆ ಶೋಧ ಮತ್ತು ವಶಪಡಿಸಿಕೊಳ್ಳುವಂತಿಲ್ಲ. ಇದು ಅಧಿಕಾರ ಮೀರಿದ ಕ್ರಮವಾಗಿದ್ದು, ಅಕ್ರಮವಾಗಿದೆ. ಅರ್ಜಿದಾರರ ಹೇಳಿಕೆ ದಾಖಲಿಸಿಕೊಂಡಿರುವ ಪ್ರತಿವಾದಿಗಳ ನಡೆಯು ಸ್ವಯಂ ದೋಷಾರೋಪಣೆ ಹೊರಿಸುವ ಕ್ರಮವಾಗಿದ್ದು, ಸಂವಿಧಾನದ 20ನೇ ವಿಧಿಗೆ ವಿರುದ್ಧ ಎಂದು ಜಗ್ಗೇಶ್‌ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ವಕೀಲ ಬಸವರಾಜ ಪಾಟೀಲ್‌ ಅವರ ಮೂಲಕ ವಕಾಲತ್ತು ಹಾಕಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com