ವಿಮಾನ ನಿಲ್ದಾಣದಲ್ಲಿ ಪಾರದರ್ಶಕ ಗಾಜಿಗೆ ಗುದ್ದಿಕೊಂಡು ಮಹಿಳೆಗೆ ಗಾಯ: ಮೂಗಿನ ಮೂಳೆ ಮುರಿತ, ಶಸ್ತ್ರಚಿಕಿತ್ಸೆಗೆ ವೈದ್ಯರ ಸಲಹೆ!

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರದರ್ಶಕ ಗಾಜಿಗೆ ಗುದ್ದಿಕೊಂಡು ಗಾಯಗೊಂಡಿದ್ದ ಮಹಿಳೆಯ ಮೂಗಿನ ಮೂಳೆ ಮುರಿತಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ನಿಶಾ ಮಿತ್ತಲ್ ಅಗರ್ವಾಲ್
ನಿಶಾ ಮಿತ್ತಲ್ ಅಗರ್ವಾಲ್

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರದರ್ಶಕ ಗಾಜಿಗೆ ಗುದ್ದಿಕೊಂಡು ಗಾಯಗೊಂಡಿದ್ದ ಮಹಿಳೆಯ ಮೂಗಿನ ಮೂಳೆ ಮುರಿತಗೊಂಡಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ನೇಪಾಳ ರಾಜಧಾನಿ ಕಠ್ಮಂಡುವಿನಿಂದ 33 ವರ್ಷದ ನಿಶಾ ಮಿತ್ತಲ್ ಅಗರ್ವಾಲ್ ಅವರು ಕುಟುಂಬದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಟರ್ಮಿನಲ್ 2 ನಲ್ಲಿ ಗಾಜಿನ ಬಾಗಿಲನ್ನು ಗಮನಿಸದ ನಿಶಾ ಅವರು ಗುದ್ದಿಕೊಂಡಿದ್ದರು. ಪರಿಣಾಮ ಮೂಗಿನಿಂದ ರಕ್ತಸ್ರಾವವಾಗಿತ್ತು.

ಅತೀವ್ರ ನೋವು ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಲಾಗಿತ್ತು. ವೈದ್ಯರು ತಪಾಸಣೆ ನಡೆಸಿ ಮೂಗಿನ ಮೂಳೆ ಮುರಿತಗೊಂಡಿರುವುದಾಗಿ ತಿಳಿಸಿದ್ದರು. ಅಲ್ಲದೆ, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ನಾವು ಸುಮಾರು 1 ಲಕ್ಷದವರೆಗೂ ಖರ್ಚು ಮಾಡಬೇಕಾಗಬಹುದು ಎಂದು ನಿಶಾ ಅವರ ಪತಿ ರಶಾಂತ್ ದಾರುಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 27 ರ ಸಂಜೆ 4.30 ರ ಸುಮಾರಿಗೆ ವಿಮಾನ ನಿಲ್ದಾಣದಲ್ಲಿದ್ದವು. ಇಮಿಗ್ರೇಷನ್ ಚೆಕ್‌ ಬಳಿಕ ಮಾರ್ಗದಂತೆಯೇ ಕಾಣಿಸುತ್ತಿದ್ದ ಗಾಜಿನ ಬಾಗಿಲಿನಿಂದ ಗುದ್ದಿಕೊಂಡಿದ್ದರು. ಈ ಸಂದರ್ಭದಲ್ಲಿ ನಾವೂ ಕೂಡ ಇಮಿಗ್ರೇಷನ್ ಚೆಕ್‌ ನಲ್ಲಿದ್ದೆವು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ್ದೆ. ಈ ವೇಳೆ ಪತ್ನಿಯ ಮುಖ ಊದಿಕೊಂಡಿರುವುದು ಕಂಡು ಬಂದಿತ್ತು. ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು. ಈ ವೇಳೆ ವಿಮಾನ ನಿಲ್ದಾಣದ ಸಿಬ್ಬಂದಿ ಅವರು ವೈದ್ಯರನ್ನು ಕರೆಯುವುದಾಗಿ ಹೇಳಿದರು. ಆದರೆ, ನಾವು ಪಾವತಿ ಮಾಡಬೇಕಿತ್ತು. ಆದರೆ, ತುರ್ತು ಸಮಯದಲ್ಲೂ ಹಣ ಕಟ್ಟುವಂತೆ ಪ್ರಕ್ರಿಯೆ ಆರಂಭಿಸಿದ್ದನ್ನು ನೋಡಿ ಬೇಸರವಾಯಿತು. ತುರ್ತು ಸಮಯದಲ್ಲಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ವೈದ್ಯಕೀಯ ನೆರವು ನೀಡಬೇಕು ಎಂದು ಪ್ರಶಾಂತ್ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿಯೇ ವೈದ್ಯರು ಇದ್ದರೂ, 15 ನಿಮಿಷಗಳ ಬಳಿಕ ನಮ್ಮ ಬಳಿಗೆ ಬಂದಿದ್ದು ಮತ್ತಷ್ಟು ಕೋಪ ತರಿಸಿತ್ತು. ವೈದ್ಯರು ಪ್ರಾಥಮಿಕ ಚಿಕಿತ್ಸಾ ಕಿಟ್ ನೊಂದಿಗೆ ಸ್ಥಳಕ್ಕೆ ಬಂದಿದ್ದರು. ರಕ್ತಸ್ರಾವ ನಿಲ್ಲಿಸಿಲು ಚಿಕಿತ್ಸೆಗೆ ರೂ.1,000 ತೆಗೆದುಕೊಂಡರು. ಜೊತೆಗೆ ಔಷಧಿಗಳಿಗೆ ರೂ.135 ನೀಡುವಂತೆ ತಿಳಿಸಿದ್ದರು ಎಂದು ತಿಳಿಸಿದ್ದಾರೆ.

ಟರ್ಮಿನಲ್ 2 ಮ್ಯಾನೇಜರ್ ವರುಣ್ ಅವರಿಂದ ನನಗೆ ದೂರವಾಣಿ ಕರೆ ಬಂದಿತ್ತು. ಖಾಸಗಿ ವಿಮಾನ ನಿಲ್ದಾಣವಾಗಿರುವುದರಿಂದ ಚಿಕಿತ್ಸೆಗೆ ಹಣ ಪಾವತಿಸಬೇಕೆಂದು ಹೇಳಿದ್ದರು. ಬಳಿಕ ನನ್ನ ಟ್ವೀಟ್ ಡಿಲೀಟ್ ಮಾಡುವಂತೆ ತಿಳಿಸಿದ್ದರು. ಆರಂಭದಲ್ಲಿ ಇದಕ್ಕೆ ನಾನು ಒಪ್ಪಿಕೊಂಡೆ. ಆದರೆ, ಪತ್ನಿಯದ್ದೇ ತಪ್ಪು, ಹಾಗಾಗಿ ಟ್ವೀಟ್ ಡಿಲೀಟ್ ಮಾಡಿದ್ದೇನೆಂದು ಅಧಿಕಾರಿಗಳು ನೀಡಿರುವ ಹೇಳಿಕೆ ಸುಳ್ಳು. ಅಧಿಕಾರಿಗಳು ಅಪ್ರಾಮಾಣಿಕವಾಗಿ ನಡೆದುಕೊಂಡಿದ್ದಾರೆ. ಪತ್ನಿಯದ್ದೇ ತಪ್ಪೆಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು ಇದೀಗ ಗಾಜಿನ ಬಾಗಿಲಿರುವುದನ್ನು ಗಮನಿಸುವಂತೆ ಸ್ಥಳದಲ್ಲಿ ಹೂವಿನ ಕುಂಡಗಳನ್ನು ಇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com