
ಶಿವಮೊಗ್ಗ: ನಗರದ ಸರ್ಕಾರಿ ಉರ್ದು ಶಾಲೆಯೊಂದರ ಶಿಕ್ಷಕಿಯೊಬ್ಬರು ತಮ್ಮ ತರಗತಿಯಲ್ಲಿ ಗಲಾಟೆ ಮಾಡಿಕೊಂಡ ಇಬ್ಬರು ಮುಸ್ಲಿಂ ಹುಡುಗರಿಗೆ, ಇದು ನಿಮ್ಮ ದೇಶ ಅಲ್ಲ, ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಳಿಕ ಶಿಕ್ಷಕಿಯನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
5ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ತರಗತಿಯಲ್ಲಿ ಜಗಳವಾಡುತ್ತಿದ್ದರಿಂದ ಶಿಕ್ಷಕಿಗೆ ಕೋಪ ಬಂದಿದೆ. ಆಕೆ ಇಬ್ಬರನ್ನು ಗದರಿಸಿದ ನಂತರವೂ ವಿದ್ಯಾರ್ಥಿಗಳು ಜಗಳ ಮುಂದುವರಿಸಿದಾಗ ಸಿಟ್ಟಿಗೆದ್ದ ಆಕೆ ‘ಇದು ನಿಮ್ಮ ದೇಶ ಅಲ್ಲ, ಪಾಕಿಸ್ತಾನಕ್ಕೆ ಹೋಗಿ’ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರ ಪ್ರಕಾರ, ಶಿಕ್ಷಕಿ 'ಪಾಕಿಸ್ತಾನಕ್ಕೆ ಹೋಗಿ, ಇದು ಹಿಂದೂಗಳ ದೇಶ' ಎಂದು ಹೇಳಿದ್ದಾಗಿ ವರದಿಯಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬ್ಲಾಕ್ ಶಿಕ್ಷಣಾಧಿಕಾರಿ ಬಿ. ನಾಗರಾಜು, ಅವರು ಕನ್ನಡ ಭಾಷೆಯ ಶಿಕ್ಷಕಿಯಾಗಿದ್ದು, ಕಳೆದ 26 ವರ್ಷಗಳಿಂದ ಸಾಮಾನ್ಯ ಉದ್ಯೋಗಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ ಎಂದರು.
ಶಿಕ್ಷಕಿಯನ್ನು ಸದ್ಯ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಈ ಕುರಿತು ಇಲಾಖಾ ತನಿಖೆ ನಡೆಸಲಾಗುವುದು. ವಿಚಾರಣೆ ವರದಿ ಬಂದ ನಂತರ ಶಿಕ್ಷಕಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
Advertisement