ಇಕೋ ಟೂರಿಸಂ ಅಭಿವೃದ್ಧಿಗೆ ಶೀಘ್ರದಲ್ಲೇ ಪ್ರತ್ಯೇಕ ನೀತಿ ರಚನೆ: ಸಚಿವ ಈಶ್ವರ್‌ ಖಂಡ್ರೆ

ಪ್ರಕೃತಿ, ಪರಿಸರ, ಅರಣ್ಯ ನಾಶವಾಗದಂತೆ ಪ್ರವಾಸೋದ್ಯಮ ಹಾಗೂ ಪರಿಸರ ಪ್ರವಾಸೋದ್ಯಮದ ವಿಪುಲ ಅವಕಾಶ ಬಳಕೆಗೆ ಪರಿಸರ ಪ್ರವಾಸೋದ್ಯಮಕ್ಕೆ ಹೊಸ ನೀತಿ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಹೇಳಿದರು.
ಸಚಿವ ಈಶ್ವರ್‌ ಖಂಡ್ರೆ
ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಪ್ರಕೃತಿ, ಪರಿಸರ, ಅರಣ್ಯ ನಾಶವಾಗದಂತೆ ಪ್ರವಾಸೋದ್ಯಮ ಹಾಗೂ ಪರಿಸರ ಪ್ರವಾಸೋದ್ಯಮದ ವಿಪುಲ ಅವಕಾಶ ಬಳಕೆಗೆ ಪರಿಸರ ಪ್ರವಾಸೋದ್ಯಮಕ್ಕೆ ಹೊಸ ನೀತಿ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಹೇಳಿದರು.

ಇಲಾಖೆ ಕಚೇರಿಯಲ್ಲಿ ಶನಿವಾರ ಕರೆದಿದ್ದ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜತೆಗೂಡಿ ಸಾಹಸ ಪ್ರವಾಸೋದ್ಯಮವನ್ನು ಪರಿಸರ ಪ್ರವಾಸೋದ್ಯಮದ ಭಾಗವಾಗಿಸಲು ಸಾಧ್ಯವಿದ್ದು, ಹೆಚ್ಚು ಜನರನ್ನು ಆಕರ್ಷಿಸಲಿದೆ ಎಂದು ಹೇಳಿದರು.

ರಿವರ್ ರಾಫ್ಟಿಂಗ್, ಚಾರಣ, ಅರಣ್ಯ ಪ್ರದೇಶದೊಳಗೆ ಇರಬಹುದಾದ ತಾಣಗಳನ್ನು ಗುರುತಿಸಿ ಪರಿಸರ ಪ್ರವಾಸೋದ್ಯಮ ವಿಸ್ತರಿಸಲು ಸಾಧ್ಯವಿದೆ. ಎಲ್ಲ ಅವಕಾಶಗಳನ್ನು ಗುರುತಿಸುವ ಮೂಲಕ ಹೆಚ್ಚೆಚ್ಚು ಜನರನ್ನು ಸೆಳೆದು, ಆಸಕ್ತಿ ಬೆಳೆಸಲು ನೆರವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಹೊಸ ನೀತಿಗೆ ಸಂಬಂಧಿಸಿದಂತೆ ಪರಿಸರ ತಜ್ಞರು, ಪ್ರವಾಸೋದ್ಯಮ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತಿತರ ಬಾಧ್ಯಸ್ಥರೊಂದಿಗೆ ಚರ್ಚಿಸಿ ಕರಡು ಪ್ರಸ್ತಾವನೆ ಸಲ್ಲಿಸಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಮೈಸೂರಿನಲ್ಲಿರುವ ಜಗದ್ವಿಖ್ಯಾತ ಚಾಮರಾಜೇಂದ್ರ ಮೃಗಾಲಯ ಮತ್ತು ಬೆಂಗಳೂರು ಹೊರ ವಲಯ ಬನ್ನೇರುಘಟ್ಟದಲ್ಲಿರುವ ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಮಹಾ ಯೋಜನೆ (ಮಾಸ್ಟರ್ ಪ್ಲಾನ್) ರೂಪಿಸುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿಗೆ ಸೂಚನೆ ನೀಡಿದರು.

ರಾಜ್ಯದ ಮೃಗಾಲಯಗಳ ಬಗ್ಗೆ ವಿಶ್ವಾದ್ಯಂತ ಉತ್ತಮ ಹೆಸರಿದೆ. ಮೃಗಾಲಯದಲ್ಲಿರುವ ಪ್ರಾಣಿಗಳ ಸಂತಾನೋತ್ಪತ್ತಿಯ ಪ್ರಮಾಣವೂ ಉತ್ತಮವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ವನ್ಯಮೃಗಗಳ ರಕ್ಷಣೆಗೆ ಮತ್ತು ಇಂದಿನ ಮಕ್ಕಳಿಗೆ ವಿವಿಧ ಪ್ರಾಣಿ ಸಂಕುಲ ಮತ್ತು ಸಸ್ಯ ಸಂಕುಲದ ಬಗ್ಗೆ ಮಾಹಿತಿ ನೀಡುವ ಮೃಗಾಲಯಗಳನ್ನು ಇನ್ನೂ ಹೆಚ್ಚು ಮಾಹಿತಿಪೂರ್ಣ ಮತ್ತು ಪ್ರೇಕ್ಷಕ ಸ್ನೇಹಿಯಾಗಿ ಮಾಡಲು ಸಮಗ್ರ ನೀತಿ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಗದಗ, ಕಲಬುರಗಿಯಲ್ಲಿರುವ ಮೃಗಾಲಯಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದ್ದು, ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com