ಮಾನವ-ಆನೆ ಸಂಘರ್ಷ ತಡೆಗೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧ: ಸಚಿವ ಈಶ್ವರ ಖಂಡ್ರೆ

ರಾಜ್ಯದಲ್ಲಿ ಮಾನವ- ಪ್ರಾಣಿ ಸಂಘರ್ಷವನ್ನು ಎದುರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಈ ಸಂಘರ್ಷವನ್ನು ನಿಭಾಯಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಬುಧವಾರ ಹೇಳಿದ್ದಾರೆ. 
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ

ಹಾಸನ: ರಾಜ್ಯದಲ್ಲಿ ಮಾನವ- ಪ್ರಾಣಿ ಸಂಘರ್ಷವನ್ನು ಎದುರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಈ ಸಂಘರ್ಷವನ್ನು ನಿಭಾಯಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಬುಧವಾರ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕಷ್ಟ. ಆನೆ ಶಿಬಿರಗಳು, ಕಂದಕಗಳನ್ನು ನಿರ್ಮಿಸುವುದು ಮತ್ತು ಸೌರ ವಿದ್ಯುತ್ ಬೇಲಿ ಅಳವಡಿಕೆ ಯೋಜನೆಗಳು ಸೇರಿದಂತೆ ಸಮಸ್ಯೆಯನ್ನು ನಿಭಾಯಿಸಲು ಅಸ್ತಿತ್ವದಲ್ಲಿರುವ ಕ್ರಮಗಳು ಖಂಡಿತವಾಗಿಯೂ ಆನೆಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತವೆ ಎಂದರು.

ಆನೆ ಪೀಡಿತ ಜಿಲ್ಲೆಗಳಾದ ಹಾಸನ, ಮಡಿಕೇರಿ, ಮೈಸೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಶಾಶ್ವತ ಪರಿಹಾರಗಳ ಕುರಿತು ಚರ್ಚಿಸುವುದಾಗಿ ಸಚಿವರು ಹೇಳಿದರು.

ಆನೆಗಳು ಜನವಸತಿ ಪ್ರದೇಶಗಳಿಗೆ ಬಾರದಂತೆ ತಡೆಯಲು ರೈಲು ತಡೆಗೋಡೆಗಳ ಮಹತ್ವವನ್ನು ತಿಳಿಸಿದ ಅವರು, ಅರಣ್ಯ ಇಲಾಖೆಯು ಇಲ್ಲಿಯವರೆಗೆ 312 ಕಿಮೀಗೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಇನ್ನೂ 300 ಕಿಮೀಗೆ ಹಾಕಲಾಗುತ್ತದೆ. ಇದಕ್ಕಾಗಿ 100 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.

11 ವರ್ಷಗಳಷ್ಟು ಹಳೆಯದಾದ ಕಸ್ತೂರಿರಂಗನ್ ವರದಿಯನ್ನು ಪರಿಶೀಲಿಸಿ, ಪರಿಸರವಾದಿಗಳು, ರೈತರು ಮತ್ತು ಸಮಾಜದ ವಿವಿಧ ವರ್ಗಗಳ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವರದಿಯನ್ನು ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಅರಣ್ಯದೊಳಗೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಇಲಾಖೆಗೆ ಹಲವು ದೂರುಗಳು ಬಂದಿದ್ದು, ಇದನ್ನು ತಡೆಯಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಲೂರು ತಾಲೂಕಿನಲ್ಲಿ ಆನೆ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್ ಮೃತಪಟ್ಟಿದ್ದು, ಆನೆಯಿಂದ ಮೃತಪಟ್ಟಿರುವ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. 

ಇದಕ್ಕೂ ಮುನ್ನ ಹಳ್ಳಿಯೂರು ಗ್ರಾಮದಲ್ಲಿರುವ ವೆಂಕಟೇಶ್ ಕುಟುಂಬವನ್ನು ಭೇಟಿ ಮಾಡಿದ ಸಚಿವರು 10 ಲಕ್ಷ ಹೆಚ್ಚುವರಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com