ಕುವೈತ್‌ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ; ಆರು ತಿಂಗಳ ಸಂಕಷ್ಟದ ನಂತರ ತವರಿಗೆ ಮರಳಿದ ಯುವಕರು

ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿನ್ ಜಂಗಮಶೆಟ್ಟಿ ಮತ್ತು ವಿಶಾಲ್ ಸೆಲಾರ್ ಎಂಬ ಇಬ್ಬರು ಯುವಕರು ಆರು ತಿಂಗಳ ಸಂಕಷ್ಟದ ನಂತರ ಭಾರತಕ್ಕೆ ಮರಳಿದ್ದಾರೆ. ಉತ್ತಮ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಅವರು ಆರು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು.
ಕುವೈತ್‌ನಿಂದ ಭಾರತಕ್ಕೆ ಬಂದ ನಂತರ ಸಚಿನ್ ಜಂಗಮಶೆಟ್ಟಿ (ಬಲ), ವಿಶಾಲ್ ಸೆಲಾರ್ (ಎಡ ಭಾಗದಲ್ಲಿ).
ಕುವೈತ್‌ನಿಂದ ಭಾರತಕ್ಕೆ ಬಂದ ನಂತರ ಸಚಿನ್ ಜಂಗಮಶೆಟ್ಟಿ (ಬಲ), ವಿಶಾಲ್ ಸೆಲಾರ್ (ಎಡ ಭಾಗದಲ್ಲಿ).
Updated on

ವಿಜಯಪುರ: ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿನ್ ಜಂಗಮಶೆಟ್ಟಿ ಮತ್ತು ವಿಶಾಲ್ ಸೆಲಾರ್ ಎಂಬ ಇಬ್ಬರು ಯುವಕರು ಆರು ತಿಂಗಳ ಸಂಕಷ್ಟದ ನಂತರ ಭಾರತಕ್ಕೆ ಮರಳಿದ್ದಾರೆ. ಉತ್ತಮ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಅವರು ಆರು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು.

ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ಇಬ್ಬರು ಯುವಕರು ತರಕಾರಿ ಪ್ಯಾಕರ್ಸ್ ಆಗಿ ಏಜೆಂಟರೊಬ್ಬರ ಮೂಲಕ ಕುವೈತ್‌ಗೆ ಹೋಗಿದ್ದರು. 'ನಮಗೆ ಕಂಪನಿಯೊಂದರಲ್ಲಿ ಕೆಲಸ ಮಾಡಬೇಕು ಮತ್ತು ತಿಂಗಳಿಗೆ 100 ಕುವೈತ್ ದಿನಾರ್‌ಗಳನ್ನು ಪಾವತಿಸಲಾಗುತ್ತದೆ ಎಂದು ನಮಗೆ ತಿಳಿಸಲಾಯಿತು. ಭಾರತೀಯ ಕರೆನ್ಸಿಯಲ್ಲಿ, ನಮಗೆ ಸುಮಾರು 32,000 ರೂ. ಸಂಬಳ ಸಿಗುತ್ತದೆ ಎಂದು ನಂಬಿದ ನಾವು ಅಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೆವು' ಎಂದು ಸಚಿನ್ ಜಂಗಮಶೆಟ್ಟಿ ಹೇಳಿದರು.

ಆದರೆ, ಅಲ್ಲಿಗೆ ತೆರಳಿದ ನಂತರ ನಮ್ಮನ್ನು ಕುವೈತ್‌ನಲ್ಲಿ ಒಂಟೆ ಹಿಂಡಿನ ಕುರುಬರಾಗಿ ಮತ್ತು ಪಾಲಕರಾಗಿ ಕೆಲಸ ಮಾಡಲು ಹೇಳಲಾಯಿತು. 'ಮುಂಬೈನಲ್ಲಿರುವ ಏಜೆಂಟ್ ನಮಗೆ ಮೋಸ ಮಾಡುತ್ತಾನೆ ಎಂದು ನಾವು ಭಾವಿಸಿರಲಿಲ್ಲ. ನಮ್ಮನ್ನು ಕುವೈತ್‌ಗೆ ಕಳುಹಿಸಲು 1 ಲಕ್ಷ ರೂ. ತೆಗೆದುಕೊಂಡಿದ್ದನು. ಕಫೀಲ್ (ಸ್ಥಳೀಯ ಪ್ರಾಯೋಜಕ) ಕೂಡ ಅಲ್ಲಿ ಕುರುಬರಾಗಿ ಕೆಲಸ ಮಾಡಿ ಎಂದು ಹೇಳುವ ಮೂಲಕ ನಮಗೆ ಮೋಸ ಮಾಡಿದರು' ಎಂದು ವಿಶಾಲ್ ಹೇಳಿದರು.

ಇಡೀ ದಿನ ನಾವು ಒಂಟೆಗಳನ್ನು ಮೇಯಿಸುತ್ತಿದ್ದೆವು ಮತ್ತು ಊಟವನ್ನು ಸಹ ನೀಡುತ್ತಿರಲಿಲ್ಲ. 'ಅವರು ನಮ್ಮ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡರು ಮತ್ತು ಹಗಲಿನ ವೇಳೆಯಲ್ಲಿ ನಮಗೆ ಫೋನ್‌ನಲ್ಲಿ ಮಾತನಾಡಲು ಸಹ ಅವಕಾಶ ನೀಡುತ್ತಿರಲಿಲ್ಲ. ನಾವು ನಮ್ಮ ಕುಟುಂಬಗಳೊಂದಿಗೆ ರಾತ್ರಿ ವೇಳೆಯಲ್ಲಿ ಮಾತ್ರ ಮಾತನಾಡುತ್ತಿದ್ದೆವು' ಎಂದು ವಿಶಾಲ್ ಹೇಳಿದರು.

ಈ ವಿಚಾರವನ್ನು ಸಂಬಂಧಿಕರು ಮತ್ತು ಮನೆಯವರ ಗಮನಕ್ಕೆ ತಂದಾಗ, ಅವರು ಸ್ಥಳೀಯ ಮುಖಂಡರ ಜತೆ ಮಾತನಾಡಿದ್ದಾರೆ. 'ಅವರು ಸಹಾಯಕ್ಕಾಗಿ ಧಾವಿಸಿದರು. ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿ, ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿದೆವು. ಬಳಿಕ ಸಂಸದರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು’ ಎಂದು ಪ್ರಕರಣವನ್ನು ಕೈಗೆತ್ತಿಕೊಂಡವರಲ್ಲಿ ಒಬ್ಬರಾದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಮೇಶ್ ಕೋಲ್ಕೂರ್ ಹೇಳಿದರು. 

ಭಾರತೀಯ ರಾಯಭಾರ ಕಚೇರಿಯ ಪತ್ರವು ನಮಗೆ ಸಹಾಯ ಮಾಡಿತು ಮತ್ತು ಇದರಿಂದಾಗಿ ನಾವು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಭಾರತೀಯ ರಾಯಭಾರ ಕಚೇರಿಯನ್ನು ತಲುಪಿದೆವು. ಅಲ್ಲಿ ಅಧಿಕಾರಿಗಳು ನಮ್ಮನ್ನು ನೋಡಿಕೊಂಡರು ಮತ್ತು ನಮಗೆ ವಿಮಾನದ ವ್ಯವಸ್ಥೆ ಮಾಡಿದರು ಎಂದು ಸಚಿನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com