ಗೌರಿ ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ; ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ವತಿಯಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಸೆಪ್ಟೆಂಬರ್ 15, 16 ಮತ್ತು 17 ರಂದು ವಿಶೇಷ ಬಸ್ಸುಗಳು ಸಂಚರಿಸಲಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 18 ರಂದು ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ವಾಹನಗಳು ಸಂಚರಿಸಲಿವೆ. ಕೆಎಸ್‌ಆರ್‌ಟಿಸಿ ವತಿಯಿಂದ 1200 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ತಿರುಪತಿಗೆ ಹೊರಡಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗವಾಗಿ ವಿಶೇಷ ಬಸ್ಸುಗಳ ಸಂಚಾರವನ್ನು ಒದಗಿಸಲಾಗುವುದು ಎಂದು ತಿಳಿಸಿದೆ.
ಪತ್ರಿಕಾ ಪ್ರಕಟಣೆ ಪ್ರಕಾರ, ತಮಿಳುನಾಡು ಮತ್ತು ಕೇರಳಕ್ಕೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಬಸ್ಸುಗಳು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಸೀಟು ಕಾಯ್ದಿರಿಸುವ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. www.ksrtc.karnataka.gov.in ವೆಬ್‌ಸೈಟ್ ಮೂಲಕ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು.
ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮೊದಲು ಮುಂಗಡ ಕಾಯ್ದಿರಿಸಿದ ಟಿಕೆಟ್‌ಗಳಲ್ಲಿ ನಮೂದಿಸಲಾದ ಬಸ್ ನಿಲ್ದಾಣ/ಪಿಕಪ್ ಪಾಯಿಂಟ್ ಹೆಸರನ್ನು ಗಮನಿಸಲು ಪ್ರಕಟಣೆ ತಿಳಿಸಿದೆ.
ಅಲ್ಲದೆ, ಪ್ರಯಾಣಿಕರು ರಾಜ್ಯ ಮತ್ತು ಅಂತರಾಜ್ಯದಲ್ಲಿರುವ 691 ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕವೂ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
ನಾಲ್ಕು ಅಥವಾ ಹೆಚ್ಚು ಪ್ರಯಾಣ ಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಘೋಷಿಸಿದೆ.
ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ಕೂಡ ಕೆಎಸ್‌ಆರ್‌ಟಿಸಿಯ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಈ ಮೂಲಕವೂ ನಿಗಮದ ಸಾರಿಗೆ ಬಸ್‌ಗಳ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ