ಮಧ್ಯಾಹ್ನದ ಬಿಸಿಯೂಟ ಯೋಜನೆ ಆಹಾರ ಇಲಾಖೆ ತೆಕ್ಕೆಗೆ?

ಶಾಲೆಗಳಿಗೆ ಪೂರೈಕೆ ಮಾಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಾಲೆಗಳಿಗೆ ಪೂರೈಕೆ ಮಾಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ಈಗಾಗಲೇ ರಾಜ್ಯ ಸರ್ಕಾರ ಚರ್ಚೆ ಆರಂಭಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ನಿನ್ನೆಯಷ್ಟೇ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಬಿಸಿಯೂಟ ಯೋಜನೆಗೆ ಈಗಿರುವುದಕ್ಕಿಂತ ಗುಣಮಟ್ಟದ ಅಕ್ಕಿ ಪೂರೈಕೆ ಮಾಡುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ. ಆದರೆ, ಇದಕ್ಕೆ ಅನುದಾನದ ಕೊರತೆ ಸೃಷ್ಟಿಯಾಗಲಿದೆ. ಹೀಗಾಗಿ ಯೋಜನೆಯನ್ನು ನಮ್ಮ ವ್ಯಾಪ್ತಿಗೆ ವರ್ಗಾಯಿಸುವಂತೆ ಆಹಾರ ಇಲಾಖೆ ಪ್ರಸ್ತಾವ ಮುಂದಿಟ್ಟಿದೆ. ಈ ಬಗ್ಗೆ ಸಹಮತ ಮೂಡದ ಹಿನ್ನೆಲೆಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮುಂದಿನ ವಾರ ನಡೆಯುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

9ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಡಿತರ ವ್ಯವಸ್ಥೆಯಲ್ಲಿ ಹಾಗೂ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್ಸಿಐನಿಂದ ಇ-ಹರಾಜು ಮೂಲಕ ಖರೀದಿಸಲಾಗುತ್ತದೆ. ರಾಜ್ಯದ ಪಡಿತರ ವ್ಯವಸ್ಥೆ ಮೂಲಕ ಪ್ರತಿ ಕೆಜಿಗೆ 34 ರೂ.ನಂತೆ ಅಕ್ಕಿ ಖರೀದಿಸಿದರೆ, ಎಫ್ಸಿಐನಿಂದ ಪಡೆಯುವ ಅಕ್ಕಿಗೆ ಪ್ರತಿ ಕೆಜಿಗೆ 26 ರೂ. ನೀಡಲಾಗುತ್ತಿದೆ. ಆದರೆ ಗುಣಮಟ್ಟದ ಅಕ್ಕಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಹೆಚ್ಚಿನ ದರ ನಿಗದಿ ಮಾಡುವುದಾಗಿ ಹೇಳಿದೆ.

ಇದರಿಂದ ಇಲಾಖೆಗೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ವಾದ ಮಂಡಿಸಲಾಗಿದೆ. ಹೀಗಾಗಿ ಬಿಸಿಯೂಟ ಯೋಜನೆಯನ್ನೇ ನಮ್ಮ ವ್ಯಾಪ್ತಿಗೆ ವರ್ಗಾಯಿಸಿ ಎಂಬ ಪ್ರಸ್ತಾವ ಇಡಲಾಗಿದೆ ಎಂದು ತಿಳಿದು ಬಂದಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪಡಿತರ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮಕ್ಕಳಿಗೆ ಪೂರೈಕೆ ಮಾಡುವ ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com