ಬೆಂಗಳೂರು: ಡಿಸೆಂಬರ್ ನಂತರ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಹೇಳಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಮೇಲ್ದರ್ಜೆಗೇರಿದ ತುರ್ತು ಚಿಕಿತ್ಸಾ ಘಟಕ ಉದ್ಘಾಟನಾ ಸಮಾರಂಭ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು ಆಸ್ಪತ್ರೆಗಳಿಗೆ ಔಷಧಗಳನ್ನು ಸರಿಯಾಗಿ ಪೂರೈಸುತ್ತಿಲ್ಲ, ಆದ್ಯತೆಯ ಮೇರೆಗೆ ಇದನ್ನು ಬದಲಾಯಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.
ಜನರು ಬೇರೆಡೆಯಿಂದ ಔಷಧಿಗಳನ್ನು ಪಡೆಯದಂತೆ ಆಸ್ಪತ್ರೆಗಳ ಹೊರಗೆ ಹೆಚ್ಚಿನ ಔಷಧಾಲಯಗಳನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು. ಆಸ್ಪತ್ರೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ನಿಧಿ ನೆರವಿನಡಿ ತುರ್ತು ಚಿಕಿತ್ಸಾ ಘಟಕ ನವೀಕರಿಸಲಾಗಿದ್ದು, ಇತರ ಖಾಸಗಿ ಕಂಪನಿಗಳಿಗೂ ತಮ್ಮ ಸಿಎಸ್‌ಆರ್ ನಿಧಿಯನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸುವಂತೆ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
Advertisement