ಗೌರವಯುತ ಜೀವನ ನಡೆಸಲು ನೆರವಿಗೆ ಬಾರದ ಪದಕ; ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ; ಪೈಲ್ವಾನ್ ಗೆ ಬೇಕಿದೆ ಸಹಾಯ ಹಸ್ತ!

ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.
ದಿನಗೂಲಿ ಮಾಡುತ್ತಿರುವ ಕುಸ್ತಿ ಪಟು
ದಿನಗೂಲಿ ಮಾಡುತ್ತಿರುವ ಕುಸ್ತಿ ಪಟು

ಬಾಗಲಕೋಟೆ: ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಇದು ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಅಪ್ಪಾಸಿ ತೇರದಾಳ ಅವರ ಕಥೆ. 42 ವರ್ಷದ ಅಪ್ಪಾಸಿ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹೆಸರಾಂತ ಜಗಜಟ್ಟಿಗಳನ್ನು ಮಣ್ಣುಮುಕ್ಕಿಸಿದ್ದಾರೆ. ಆದರೆ ಈಗ ದಿನಗೂಲಿ ಕೆಲಸ ಮಾಡುತ್ತಾ ಮುಧೋಳ ಪೇಟೆಯ ಮಾರುಕಟ್ಟೆಯಲ್ಲಿ ಗೋಣಿ ಚೀಲ ತರಕಾರಿ ಹೊತ್ತುಕೊಂಡು ಪ್ರತಿನಿತ್ಯ ಅಲ್ಪ ಸಂಪಾದನೆ ಮಾಡುತ್ತಿದ್ದಾರೆ.

ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಣಿಪುರ, ಹರಿಯಾಣ, ಪಂಜಾಬ್ ಮೊದಲಾದೆಡೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮೈಸೂರಿನ ದಸರಾ ಕ್ರೀಡಾಕೂಟ ಸೇರಿದಂತೆ ಕರ್ನಾಟಕದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇತ್ತೀಚೆಗೆ, ಅವರು ಮಲೇಷ್ಯಾದಲ್ಲಿ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದರು, ಆದರೆ ಅವರ ಆರ್ಥಿಕ ಸ್ಥಿತಿಯಿಂದ ಅಲ್ಲಿಗೆ ಹೋಗಲಾಗಲಿಲ್ಲ.

ವೃತ್ತಿಯಲ್ಲಿ ಮಾಸ್ಟರ್ ಆಗಿರುವ ಅಪ್ಪಾಸಿ, ದುನಿಯಾ ವಿಜಯ್ ಸೇರಿದಂತೆ ಹಲವಾರು ಕನ್ನಡ ನಟರಿಗೆ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ತರಬೇತಿ ನೀಡಿದ್ದಾರೆ. ದುನಿಯಾ ವಿಜಯ್ 2018 ರ ಕನಕ ಚಿತ್ರದಲ್ಲಿನ ಪಾತ್ರಕ್ಕಾಗಿ ಅಪ್ಪಾಸಿ ಅವರಿಂದ ಕುಸ್ತಿಯ ಪಟ್ಟುಗಳನ್ನು ಕಲಿತರು. "ನಾನು ವಿಜಯ್‌ಗೆ ಪಾತ್ರಕ್ಕಾಗಿ ವಾರಗಟ್ಟಲೆ ತರಬೇತಿ ನೀಡಿದ್ದೇನೆ" ಎಂದು ಅವರು ಹೇಳಿದ್ದಾರೆ.

ಅಪ್ಪಾಸಿ ಅವರು ಸ್ವಲ್ಪ ಹಣ ಗಳಿಸಲು ತರಬೇತುದಾರರಾಗಿ ಕೆಲವು ಪಂದ್ಯಾವಳಿಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ನಿಯಮಿತ ಆದಾಯದ ಮೂಲಗಳಿಲ್ಲದ ಕಾರಣ, ಕುಸ್ತಿಯ ಮೇಲಿನ ಉತ್ಸಾಹವನ್ನು ಮುಂದುವರಿಸಲು ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಲು, ನಾನು ಅನೇಕ ಜನರ ಆರ್ಥಿಕ ಸಹಾಯವನ್ನು ಕೋರಿದೆ ಮತ್ತು ಪಡೆದಿದ್ದೇನೆ. ನನ್ನ ಬಳಿ ಹತ್ತಾರು ಪದಕಗಳಿವೆ, ಆದರೆ ಅವು ನನಗೆ ಯೋಗ್ಯವಾದ ಜೀವನವನ್ನು ಗಳಿಸಲು ಸಹಾಯ ಮಾಡಲಿಲ್ಲ ಎಂದು  ಬೇಸರ ವ್ಯಕ್ತ ಪಡಿಸಿದ್ದಾರೆ. ಹಣಕಾಸಿನ ಸಮಸ್ಯೆಯ ನಡುವೆಯೂ ಅಪ್ಪಾಸಿ ಕುಸ್ತಿ ಅಕಾಡೆಮಿ ತೆರೆಯುವ ಕನಸು ಹೊತ್ತಿದ್ದಾರೆ. ಸರ್ಕಾರ ಅಥವಾ ಯಾವುದೇ ಸಂಸ್ಥೆಯು ಅವರಿಗೆ ಜಮೀನು ಮತ್ತು ಆರ್ಥಿಕ ಸಹಾಯ ನೀಡಿದರೆ, ಉದಯೋನ್ಮುಖ ಕುಸ್ತಿಪಟುಗಳಿಗಾಗಿ ಕುಸ್ತಿ ಅಕಾಡೆಮಿಯನ್ನು ತೆರೆಯಲು ಅಪ್ಪಾಸಿ ಬಯಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com