CWRC ನಿರ್ದೇಶನ ಕರ್ನಾಟಕ ಪಾಲಿಗೆ ದೊಡ್ಡ ಹಿನ್ನಡೆ: ಬಿಜೆಪಿ, ಜೆಡಿಎಸ್ ಆಕ್ರೋಶ

ಸೆಪ್ಚೆಂಬರ್ 28 ಅಂದರೆ ನಾಳೆಯಿಂದ 18 ದಿನಗಳ ಕಾಲ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ರಾಜ್ಯಕ್ಕೆ ನಿರ್ದೇಶನ ನೀಡಿರುವುದು ಕರ್ನಾಟಕಕ್ಕೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಬಣ್ಣಿಸಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ರಾಜ್ಯ ಸರ್ಕಾರವನ್ನು ವಿಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೆಪ್ಚೆಂಬರ್ 28 ಅಂದರೆ ನಾಳೆಯಿಂದ 18 ದಿನಗಳ ಕಾಲ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ರಾಜ್ಯಕ್ಕೆ ನಿರ್ದೇಶನ ನೀಡಿರುವುದು ಕರ್ನಾಟಕಕ್ಕೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಬಣ್ಣಿಸಿದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ರಾಜ್ಯ ಸರ್ಕಾರವನ್ನು ವಿಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ. 

ಕರ್ನಾಟಕವು ಸತತ ಹಿನ್ನಡೆಗಳನ್ನು ಎದುರಿಸುತ್ತಿದೆ ಮತ್ತು CWRC ನಿರ್ದೇಶನವು ಕರ್ನಾಟಕ ಪಾಲಿಗೆ ಮರಣಶಾಸನ ಎಂದು ಹೆಚ್ ಡಿ ಕುಮಾರಸ್ವಾಮಿ ಬಣ್ಣಿಸಿದ್ದಾರೆ. ಕಾವೇರಿ ಜಲಾಶಯಗಳಿಗೆ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರೆ, ರಾಜ್ಯಕ್ಕೆ ನೀರಿಲ್ಲ ಎಂದು ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಅಧಿಕಾರಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಜಲಸಂಪನ್ಮೂಲ ಇಲಾಖೆ ಮತ್ತು ಸರ್ಕಾರದ ನಡುವೆ ಯಾವುದೇ ಸಮನ್ವಯವಿಲ್ಲ, ತಮಿಳುನಾಡು ರಾಜ್ಯ ಕರ್ನಾಟಕದ ವೈಫಲ್ಯಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಇಂತಹ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. ರಾಜ್ಯವು ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಸರ್ಕಾರವು ಜನರ ಅದರಲ್ಲೂ ರೈತರ ವಿಶ್ವಾಸವನ್ನು ಕಳೆದುಕೊಂಡಿದೆ. ರಾಜ್ಯ ಸರಕಾರ ಜನರ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ ಎಂದರು.

ನಿನ್ನೆ ಬೆಂಗಳೂರು ಪ್ರತಿಭಟನೆ ವೇಳೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂಬ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಡಬ್ಲ್ಯುಆರ್‌ಸಿ ಸಭೆ ನಡೆಯುತ್ತಿರುವಾಗ ಇಂತಹ ಹೇಳಿಕೆ ನೀಡುವ ಅಗತ್ಯ ಏನಿತ್ತು? ಇಂತಹ ಹೇಳಿಕೆಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

ಸ್ಟಾಲಿನ್ ಭೇಟಿ ಮಾಡಲಿರುವ ಬಿಜೆಪಿ ಸಂಸದರು: ಚೆನ್ನೈನಲ್ಲಿರುವ ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯಾ ಅವರು ಇಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅವರಿಗೆ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸುತ್ತೇನೆ ಎಂದು ಸಿಂಗ್ ಹೇಳಿದರು. ನಾನು ಅವರಿಗೆ ಪತ್ರ ಬರೆದು ಇಮೇಲ್ ಕೂಡ ಕಳುಹಿಸಿದ್ದೆ, ಕರ್ನಾಟಕದಲ್ಲಿ ಸಾಕಷ್ಟು ತಮಿಳು ಮಾತನಾಡುವ ಜನರು ನೀರಿನ ಕೊರತೆಯಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರಿಗೆ ವಿವರಿಸುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com