ಎಸ್ಎಸ್ಎಲ್'ಸಿ ಪರೀಕ್ಷೆಗೆ 8.14 ಲಕ್ಷ ವಿದ್ಯಾರ್ಥಿಗಳು ಹಾಜರು

10ನೇ ತರಗತಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆದಿದ್ದು, ಮೊದಲ ದಿನದ ಪರೀಕ್ಷೆಗೆ 8.14 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ಬೆಂಗಳೂರು: 10ನೇ ತರಗತಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆದಿದ್ದು, ಮೊದಲ ದಿನದ ಪರೀಕ್ಷೆಗೆ 8.14 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬಂದಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಶುಭ ಹಾರೈಸಿದ್ದರು.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದಿನಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲಾ ಪ್ರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಯಾವುದೇ ರೀತಿಯ ಆತಂಕ ಹಾಗೂ ಗೊಂದಲಕ್ಕೆ ಒಳಗಾಗದೇ, ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ, ಸಮಾಧಾನ ಚಿತ್ತದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ಹೇಳಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುತ್ತಿರುವ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಯಾವುದೇ ಭಯ, ಆತಂಕಗಳಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದರು.

ಪರೀಕ್ಷೆ ಬಳಿಕ ಕೆಲ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದು, ಮಾನಸಿಕ ಖಿನ್ನತೆಗೊಳಗಾಗುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹೀಗಾಗಿ ಮಕ್ಕಳನ್ನು ಪ್ರೋತ್ಸಾಹಿಸಲು, ಧೈರ್ಯ ತುಂಬಲು ಕೆಲವರು ತಮ್ಮ ಮಾರ್ಕ್ಸ್ ಕಾರ್ಡ್ ಗಳನ್ನೂ ಪೋಸ್ಟ್ ಮಾಡಿರುವುದು ಕಂಡು ಬಂದಿತ್ತು, ಕಡಿಮೆ ಅಂಕ ಬಂದರೂ, ತಮ್ಮ ಗುರಿ ಸಾಧಿಸಿರುವುದಾಗಿ ತಿಳಿಸಿದ್ದರು. ಈ ಮೂಲಕ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ರಾಜ್ಯದ 3,305 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಥಮ ಭಾಷಾ ಪರೀಕ್ಷೆಗಳನ್ನು ಬರೆದಿದ್ದು, ಪರೀಕ್ಷೆಯಲ್ಲಿ ಶೇ.98.48ರಷ್ಟು ಹಾಜರಾತಿ ಕಂಡುಬಂದಿತ್ತು. ಒಟ್ಟು 8,27,276 ನೋಂದಾಯಿತ ವಿದ್ಯಾರ್ಥಿಗಳ ಪೈಕಿ 12,550 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಕುತೂಹಲಕಾರಿ ವಿಚಾರವೆಂದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅತಿ ಹೆಚ್ಚು ಶೇ.99.55 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ ಶೇ.95.51ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ಕೆಲ ವಿದ್ಯಾರ್ಥಿಗಲು ಹಾಲ್ ಟಿಕೆಟ್ ಇಲ್ಲದೆ, ಸಂಕಷ್ಟ ಎದುರಿಸಿದ್ದು ಬಿಟ್ಟರೆ, ಮೊದಲ ದಿನದ ಪರೀಕ್ಷೆಯು ಯಾವುದೇ ಅಡೆತಡೆಗಳಿಲ್ಲದೆ, ಸುಗಮವಾಗಿ ನಡೆಯಿತು. ಯಾವುದೇ ಅಕ್ರಮಗಳು ವರದಿಯಾಗಿಲ್ಲ.

ಶಾಲೆಗಳಲ್ಲಿ ಹಾಜರಾತಿ ಸಮಸ್ಯೆಗಳಿದ್ದ ಕಾರಣ, ಕೆಲ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಗಳನ್ನು ಪಡೆದುಕೊಂಡಿರಲಿಲ್ಲ. ಆದರೂ ಇದನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹಾಜರಾಗದ್ದರಿಂದ ಗೊಂದಲಗಳು ಸೃಷ್ಟಿಯಾಗಿತ್ತು ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ವಿದ್ಯಾರ್ಥಿಗಳು ಸೋಮವಾರ ತಮ್ಮ ಎರಡನೇ ಪರೀಕ್ಷೆಯನ್ನು ಬರೆಯಲಿದ್ದಾರೆ. ಏಪ್ರಿಲ್ 15ಕ್ಕೆ ಪರೀಕ್ಷೆಗಳು ಪೂರ್ಣಗೊಳ್ಳಲಿವೆ.

ದ.ಕ.ಜಿಲ್ಲೆಯ ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ
ಪದವಿ ಪೂರ್ವ ಶಿಕ್ಷಣ ಇಲಾಖೆ (ಡಿಪಿಯುಇ)ಯು ಶುಕ್ರವಾರ ಪ್ರಥಮ ಪಿಯುಸಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಮಾರ್ಚ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು DPUE ವೆಬ್‌ಸೈಟ್‌ನಲ್ಲಿ (result.dkpucpa.com) ಪರಿಶೀಲಿಸಬಹುದಾಗಿದೆ.

ಫಲಿತಾಂಶಗಳ ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಗಳು ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಮಾರ್ಚ್ 6 ರಂದು ಪರೀಕ್ಷೆಗಳು ನಡೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com