ನಟ ಸುದೀಪ್'ಗೆ ಬೆದರಿಕೆ ಪತ್ರ: ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ

ನಟ ಕಿಚ್ಚ ಸುದೀಪ್​​ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು,ಈ ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಟ ಕಿಚ್ಚ ಸುದೀಪ್​​ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು,ಈ ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದೆ.

ಬೆದರಿಕೆ ಪತ್ರ ಸಂಬಂಧ ಸುದೀಪ್​ ಮ್ಯಾನೇಜರ್​ ಜಾಕ್​ ಮಂಜು ಅವರು ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಬೆದರಿಕೆ ಪತ್ರ ಪ್ರಕರಣವನ್ನು ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಸುದೀಪ್ ಅವರಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿರುವ ವ್ಯಕ್ತಿಗಳು, ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ನಿನ್ನೆಯಷ್ಟೇ ಸುದೀಪ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂಬ ಸುದ್ದಿ ಭಾರೀ ವೈರಲ್ ಆಗಿತ್ತು. ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದರು.

ಈ ಸುದ್ದಿಗೋಷ್ಠಿಗೂ ಮೊದಲು ಬೆದರಿಕೆ ಪತ್ರದ ಕುರಿತು ಸುದೀಪ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಬೆದರಿಕೆ ಪತ್ರವನ್ನು ಸಾರ್ವಜನಿಕಗೊಳಿಸಿದ್ದರು.

ಚಿತ್ರರಂಗ ಎಲ್ಲಾ ಉದ್ಯಮದಂತೆ ಒಳ್ಳೆಯವರು, ಕೆಟ್ಟವರು, ನಮಗೆ ಬೇಕಾದವರು, ಆದವರು, ಆಗದವರು ಇದ್ದಾರೆ. ನನ್ನ ಮನೆಯ ವಿಳಾಸ ಗೊತ್ತಿದೆ, ಹೀಗಾಗಿ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಇದು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂದು ಗೊತ್ತಿದೆ. ಕ್ರಮ ತೆಗೆದುಕೊಳ್ಳಲು ದೂರು ನೀಡಿದ್ದೇವೆ, ಇಂತಹ ಬೆದರಿಕೆಗಳಿಗೆಲ್ಲ ಹೆದರುವವನು ನಾನಲ್ಲ ಎಂದು ಹೇಳಿದ್ದರು.

ಬೆದರಿಕೆ ಪತ್ರ ವಿಚಾರ ಹಳೆಯದು. ಈಗೇಕೆ ಮತ್ತೆ ಸುದ್ದಿಯಾಗುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಮ್ಯಾನೇಜರ್ ಮಂಜುನಾಥ್ ಅವರು ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಡಿಸಿಪಿ (ದಕ್ಷಿಣ) ಪಿ ಕೃಷ್ಣಕಾಂತ್ ಅವರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಶಾಂತಿ ಭಂಗ (IPC 504), ಕ್ರಿಮಿನಲ್ ಬೆದರಿಕೆ (IPC 506) ಮತ್ತು ಪಿತೂರಿ (IPC 120B) ಪ್ರಕರಣವನ್ನು ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com