ಎರಡು ಕ್ಷೇತ್ರಗಳಲ್ಲಿ ಹಗ್ಗ-ಜಗ್ಗಾಟ; ಕನಕಪುರಕ್ಕೆ ಅಶೋಕ್ ಆಗ್ತಾರಾ 'ಸಾಮ್ರಾಟ'! ಯಾರಿಗೆ ಬೇಡ ಹೇಳಿ ಮುಖ್ಯಮಂತ್ರಿ ಪಟ್ಟ? (ಮಾಜಿ ಡಿಸಿಎಂ ಸಂದರ್ಶನ)

ರಾಜ್ಯ ವಿಧಾನಸಭಾ ಚನಾವಣೆ 2023ಕ್ಕೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿಯು ಪದ್ಮನಾಭನಗರ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರಗಳಿಂದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಕಣಕ್ಕಿಳಿಸಿದೆ. ಅತ್ಯಂತ ಪ್ರಭಾವಿ ಒಕ್ಕಲಿಗ ನಾಯಕರಲ್ಲಿ ಒಬ್ಬರಾದ ಅಶೋಕ ಅವರು ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಚಿವ ಆರ್.ಅಶೋಕ್.
ಸಚಿವ ಆರ್.ಅಶೋಕ್.

ಬೆಂಗಳೂರು: ರಾಜ್ಯ ವಿಧಾನಸಭಾ ಚನಾವಣೆ 2023ಕ್ಕೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿಯು ಪದ್ಮನಾಭನಗರ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರಗಳಿಂದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಕಣಕ್ಕಿಳಿಸಿದೆ. ಅತ್ಯಂತ ಪ್ರಭಾವಿ ಒಕ್ಕಲಿಗ ನಾಯಕರಲ್ಲಿ ಒಬ್ಬರಾದ ಅಶೋಕ ಅವರು ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಮೊದಲು ಅಶೋಕ್ ಅವರನ್ನು ರಾಮನಗರದಿಂದ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಕಾಲಿಡಲು ಬಿಜೆಪಿ ಮುಂದಾಗಿತ್ತು. ಆದರೆ, ಅಂತಿಮವಾಗಿ ಪದ್ಮನಾಭನಗರ ಮತ್ತು ಕನಕಪುರದಲ್ಲಿ ಸ್ಪರ್ಧಿಸುವಂತೆ ಟಿಕೆಟ್ ನೀಡಿದೆ.

ಈ ನಡುವೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಎದುರಾಗುವ ಸವಾಲುಗಳು, ಕಾರ್ಯತಂತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅಶೋಕ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಿಜೆಪಿ ನಿಮ್ಮನ್ನು ಎರಡು ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿಸುತ್ತಿದೆ...?
ನಾನು ಉತ್ತಮ ಹೋರಾಟ ನೀಡುತ್ತೇನೆ ಎಂದು ಭಾವಿಸಿದ ಪಕ್ಷವು ಎರಡೂ ಕ್ಷೇತ್ರಗಳಿಗೆ ನನ್ನನ್ನು ಆಯ್ಕೆ ಮಾಡಿದೆ. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ತಂತ್ರ. ನಾನು ಸೈನಿಕನಿದ್ದಂತೆ, ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದು ನನ್ನ ಕರ್ತವ್ಯ. ಏಪ್ರಿಲ್ 17 ರಂದು ಪದ್ಮನಾಭನಗರದಿಂದ ಮತ್ತು ಏಪ್ರಿಲ್ 18 ಅಥವಾ 19 ರಂದು ಕನಕಪುರದಿಂದ ನಾಮಪತ್ರ ಸಲ್ಲಿಸಲಿದ್ದೇನೆ.

ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದು ನಿಮ್ಮ ಮೇಲೆ ಒತ್ತಡ ತರುತ್ತದೆ ಎಂದು ನೀವು ಭಾವಿಸುತ್ತೀರಾ?
ಹೌದು ಅದು ನಿಜ. ಇದು ಅಪಾಯಕಾರಿಯೂ ಹೌದು. ನಾನು ಶ್ರಮದಾಯಕವಾಗಿ ಕೆಲಸ ಮಾಡಬೇಕಾಗಿದೆ. ಪಕ್ಷವು ಸಾಕಷ್ಟು ಚಿಂತನೆ ನಡೆಸಿ ಸ್ಪರ್ಧಿಸುವಂತೆ ಸೂಚಿಸಿದೆ. ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸವಿದೆ.

ಎರಡೂ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ನೀಡುತ್ತಿರುವ ವಿಚಾರ ಯಾವುದು?
ಪದ್ಮನಾಭನಗರ ಕ್ಷೇತ್ರವನ್ನು ನಾನು ಅಭಿವೃದ್ಧಿ ಮಾಡಿದ್ದೇನೆ, ನನ್ನ ಅಭಿವೃದ್ಧಿ ಕಾರ್ಯಗಳಿಂದ ಇಲ್ಲಿನ ಜನರು ಮತ ಹಾಕುತ್ತಾರೆ. ಕನಕಪುರದಲ್ಲಿ ಮೋದಿ ಆಡಳಿತ ಬೇಕಾ ಅಥವಾ ಡಿಕೆ ಶಿವಕುಮಾರ್ ಆಡಳಿತ ಬೇಕಾ ಎಂದು ಜನರನ್ನು ಕೇಳುತ್ತೇನೆ. ಶಿವಕುಮಾರ್ ಅವರ ಆಡಳಿತ ಅಲ್ಲಿನ ಜನರಿಗೆ ಬೇಕಾಗಿಲ್ಲ.

ಎರಡೂ ಕ್ಷೇತ್ರಗಳಲ್ಲಿ ಹೇಗೆ ಪ್ರಚಾರ ನಡೆಸುತ್ತೀರಿ?
ಈ ಕಾರ್ಯವನ್ನು ನಿರ್ವಹಿಸುವ ಶಕ್ತಿ ನನಗಿದೆ. ನಾನು ಎರಡು ಸ್ಥಾನಗಳಲ್ಲಿ ಸ್ಪರ್ಧಿಸದಿದ್ದರೆ 50 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಬೇಕಾಗುತ್ತಿತ್ತು, ಅದಕ್ಕೆ ಪಕ್ಷ ನನಗೆ ಜವಾಬ್ದಾರಿ ನೀಡಿದೆ. ಈಗ ಈ ಎರಡು ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸುತ್ತೇನೆ.

ಕನಕಪುರ ಭಾಗದಲ್ಲಿ ಗೆಲ್ಲುವುದು ಎಷ್ಟು ಕಷ್ಟ?
2018ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು 6,000 ಮತಗಳನ್ನು ಗಳಿಸಿದ್ದರು. ನಮ್ಮಲ್ಲಿ ಕೆಲವೇ ಕೆಲವು ಬಿಜೆಪಿ ಕಾರ್ಯಕರ್ತರು ಇದ್ದಾರೆ. ಪಕ್ಷದ ಕಾರ್ಯಕರ್ತರ ಸಂಖ್ಯೆ ಮತ್ತು ಮತ ಹಂಚಿಕೆಯನ್ನು ಹೆಚ್ಚಿಸಬೇಕು. ಬಿಜೆಪಿ ಈ ಸವಾಲನ್ನು ಭೇದಿಸಬೇಕಿದೆ, ಅದಕ್ಕಾಗಿಯೇ ಪಕ್ಷ ನನ್ನನ್ನು ಕಣಕ್ಕಿಳಿಸುತ್ತಿದೆ. ಪ್ರಧಾನಿ ಮೋದಿ ಅವರ ಹೆಸರು ಮತ್ತು ಸಚಿವನಾಗಿ ನಾನು ಮಾಡಿದ ಉತ್ತಮ ಕೆಲಸಗಳಿಂದ ಪಕ್ಷ ಗೆಲುವು ಸಾಧಿಸಲಿದೆ.

ಅಶೋಕ್ ಮುಖ್ಯಮಂತ್ರಿಯಾಗಬಹುದೇ?
ಕಂದಾಯ ಸಚಿವನಾಗಿ ಅಥವಾ ಗೃಹ ಸಚಿವನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನನ್ನಂತೆ ಬೇರೆ ಯಾವ ನಾಯಕರೂ ಪ್ರಯಾಣಿಸಿಲ್ಲ. ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ನನ್ನನ್ನು ಬೆಂಗಳೂರಿಗೆ ಸೀಮಿತಗೊಳಿಸಬೇಡಿ. ನಾನೊಬ್ಬ ರಾಜ್ಯ ನಾಯಕ. ಇದೂವರೆಗೆ ಬೆಂಗಳೂರಿನ ಯಾರೂ ಕರ್ನಾಟಕದ ಮುಖ್ಯಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ನೇಮಕ ಮಾಡುವುದು ಪಕ್ಷದ ತೀರ್ಮಾನ. ಪಕ್ಷ ಅವಕಾಶ ಕೊಟ್ಟರೆ ನಾನು ಮುಖ್ಯಮಂತ್ರಿಯಾಗುತ್ತೇನೆ. ಮುಖ್ಯಮಂತ್ರಿಯಾಗುವ ಆಸೆ ಯಾರಿಗಿಲ್ಲ? ನನ್ನ ಅದೃಷ್ಟದಲ್ಲಿ ಏನಿದೆ ನೋಡೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com