ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ; ಪೊಕ್ಸೊ ಪ್ರಕರಣದಲ್ಲಿ ಯುವಕನಿಗೆ 20 ವರ್ಷ ಜೈಲು ಶಿಕ್ಷೆ
ಬೈಂದೂರಿನ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ ನಂತರ ಹಲವು ಬಾರಿ ಅತ್ಯಾಚಾರ ಎಸಗಿದ ಯುವಕನಿಗೆ ಉಡುಪಿ ಜಿಲ್ಲೆಯ ತ್ವರಿತ ಪೊಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
Published: 19th April 2023 12:27 PM | Last Updated: 19th April 2023 03:27 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಬೈಂದೂರಿನ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ ನಂತರ ಹಲವು ಬಾರಿ ಅತ್ಯಾಚಾರ ಎಸಗಿದ ಯುವಕನಿಗೆ ಉಡುಪಿ ಜಿಲ್ಲೆಯ ತ್ವರಿತ ಪೊಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 23 ವರ್ಷದ ಸಾಹಿಲ್‌ಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಆರೋಪಪಟ್ಟಿ ಪ್ರಕಾರ, ಸಾಹಿಲ್ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಹೋಟೆಲ್ ಬಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆ ಉಡುಪಿಯ ಬೈಂದೂರು ಮೂಲದವರಾಗಿದ್ದು, ಆಕೆಯ ತಂದೆ ಸಾಗರದಲ್ಲಿ ಹೋಟೆಲ್ ಹೊಂದಿದ್ದರಿಂದ ಅಲ್ಲಿಯೇ ವಾಸವಾಗಿದ್ದರು.
ಯುವಕ ಆಕೆಯೊಂದಿಗೆ ಮೊದಲಿಗೆ ಸ್ನೇಹವನ್ನು ಬೆಳೆಸಿದ್ದಾನೆ. 2021ರ ಜುಲೈನಲ್ಲಿ ಸಾಹಿಲ್ ಬಾಲಕಿಯ ಹುಟ್ಟುಹಬ್ಬದ ಆಚರಣೆಗಾಗಿ ಬೈಂದೂರಿಗೆ ಪ್ರಯಾಣ ಬೆಳೆಸಿದ್ದಾನೆ. ಹುಟ್ಟುಹಬ್ಬದ ಪಾರ್ಟಿಯ ನಂತರ ಸಂತ್ರಸ್ತೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಯುವಕ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಪದೇ ಪದೆ ಕೃತ್ಯ ಎಸಗಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದಲಿತ ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿದ ಅತ್ಯಾಚಾರ ಆರೋಪಿ: ಎರಡು ಶಿಶುಗಳ ಜೀವನ್ಮರಣ ಹೋರಾಟ!
ಸಂತ್ರಸ್ತೆಯ ತಾಯಿಗೆ ಈ ಸಂಬಂಧ ತಿಳಿದಾಗ ಅವರು, ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ ಕಾಯ್ಕಿಣಿ ಅವರು ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿದ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ ಅವರು, ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 22,500 ರೂ. ದಂಡವನ್ನು ವಿಧಿಸಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೈಟಿ ರಾಘವೇಂದ್ರ ವಾದ ಮಂಡಿಸಿದ್ದರು.