ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯದಲ್ಲಿ ಇದೇ ಶನಿವಾರ, ಭಾನುವಾರ ಪ್ರಧಾನಿ ಮೋದಿ ಎರಡು ರೋಡ್ ಶೋ, 6 ಸಾರ್ವಜನಿಕ ಸಭೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರಾಂತ್ಯದಲ್ಲಿ ಎರಡು ಬೃಹತ್ ರೋಡ್‌ಶೋಗಳು ಮತ್ತು ಆರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರಾಂತ್ಯದಲ್ಲಿ ಎರಡು ಬೃಹತ್ ರೋಡ್‌ಶೋಗಳು ಮತ್ತು ಆರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಪ್ರಧಾನಿಯವರು ಏಪ್ರಿಲ್ 29 ಮತ್ತು 30ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮೊದಲ ದಿನವೇ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ ನಡೆಸಲಿದ್ದಾರೆ.

'ಈ ರೋಡ್ ಶೋ ಸುಮಾರು 10 ಕಿಲೋಮೀಟರ್ ಉದ್ದ ನಡೆಯಲಿದ್ದು, ಇದರಲ್ಲಿ ಬೆಂಗಳೂರು ಉತ್ತರದ ಮೂರು ವಿಧಾನಸಭಾ ಕ್ಷೇತ್ರಗಳನ್ನು ಸುಮಾರು 45 ನಿಮಿಷಗಳಲ್ಲಿ ಕ್ರಮಿಸಲಾಗುವುದು' ಎಂದು ಮೂಲಗಳು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿವೆ.

ಏಪ್ರಿಲ್ 30 ರಂದು ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. 'ಮಧ್ಯಾಹ್ನ ಚನ್ನಪಟ್ಟಣದಲ್ಲಿ ಎರಡನೇ ಸಾರ್ವಜನಿಕ ಸಭೆ, ಸಂಜೆ 5 ಗಂಟೆಗೆ ಬೇಲೂರಿನಲ್ಲಿ ಮೂರನೇ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಇದಾದ ನಂತರ ಮೈಸೂರು ನಗರದಲ್ಲಿಯೂ ರೋಡ್ ಶೋ ನಡೆಸಬಹುದು' ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರ ಮೆಗಾ ರೋಡ್‌ ಶೋ ಏಪ್ರಿಲ್ 29 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

'ಬೆಂಗಳೂರಿನ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ವರೆಗೆ ರೋಡ್‌ಶೋ ನಡೆಯಲಿದೆ. ಇದರ ನಂತರ, ಅವರು ಅಂದು ರಾತ್ರಿ ನಗರದಲ್ಲಿ ಉಳಿಯಬಹುದು. ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ರೋಡ್‌ಶೋ ನಡೆಸುವುದಕ್ಕೂ ಮುನ್ನ ಹುಮನಾಬಾದ್, ವಿಜಯಪುರ ಮತ್ತು ಕುಡಚಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ. ," ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ 30 ರಂದು ಕೋಲಾರ, ಚನ್ನಪಟ್ಟಣ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಇದಾದ ನಂತರ ಮೇ 2 ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು ಮತ್ತು ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಮೇ 3 ರಂದು ಮೂಡುಬಿದಿರೆ, ಕಾರವಾರ ಮತ್ತು ಕಿತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಗುಜರಾತ್‌ನ ಅಹಮದಾಬಾದ್ ಮಾದರಿಯಲ್ಲಿ, ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೆಗಾ ರೋಡ್‌ಶೋ ಆಯೋಜಿಸಲು ಪಕ್ಷವು ನಿರ್ಧರಿಸಿದೆ. ಈ ರೋಡ್‌ಶೋಗಳ ಜೊತೆಗೆ, ಬಿಜೆಪಿ ರಾಜ್ಯದಲ್ಲಿ ಎರಡು ಅಥವಾ ಮೂರು ಹೆಚ್ಚುವರಿ ರೋಡ್‌ಶೋಗಳನ್ನು ಆಯೋಜಿಸುವ ಸಾಧ್ಯತೆಯಿದೆ. 

ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಅತಿ ದೊಡ್ಡ ರೋಡ್‌ಶೋ ನಡೆಸಿದ್ದರು. ಇದು 19 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 50 ಕಿ.ಮೀ. ಕ್ರಮಿಸಿತ್ತು.

ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬುದು ಭಾರತೀಯ ಜನತಾ ಪಕ್ಷದ ಮುಂದಿರುವ ಏಕೈಕ ಸವಾಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಈಗಾಗಲೇ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಗಮನಾರ್ಹವೆಂದರೆ, ಬಿಜೆಪಿ ಅಧಿಕಾರದಲ್ಲಿರುವ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕ.

ಕರ್ನಾಟಕದ ಚುನಾವಣೆಯನ್ನು 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ಬಿಜೆಪಿ ಇತರ ರಾಜ್ಯಗಳಿಗಿಂತ ಕರ್ನಾಟಕದತ್ತ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೇರಲು ಹವಣಿಸುತ್ತಿದ್ದು, ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com