ತಲೆಗೆ ಗಾಯ: ಪ್ರಚಾರ ಕಾರ್ಯದಿಂದ ವಿರಾಮ, ವಿಶ್ರಾಂತಿ ಪಡೆಯುತ್ತಿರುವ ಡಾ.ಜಿ.ಪರಮೇಶ್ವರ್

ಚುನಾವಣಾ ಪ್ರಚಾರದ ವೇಳೆ ಕಲ್ಲಿನಿಂದ ಆದ ದಾಳಿಯಲ್ಲಿ ತಲೆಗೆ ಪೆಟ್ಟು ಬಿದ್ದು, ವಿಶ್ರಾಂತಿ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಅವರು, ಪ್ರಚಾರ ಕಾರ್ಯದಿಂದ ವಿರಾಮ ಪಡೆದುಕೊಂಡಿದ್ದಾರೆ.
ಪರಮೇಶ್ವರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.
ಪರಮೇಶ್ವರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.

ತುಮಕೂರು: ಚುನಾವಣಾ ಪ್ರಚಾರದ ವೇಳೆ ಕಲ್ಲಿನಿಂದ ಆದ ದಾಳಿಯಲ್ಲಿ ತಲೆಗೆ ಪೆಟ್ಟು ಬಿದ್ದು, ವಿಶ್ರಾಂತಿ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಜಿ.ಪರಮೇಶ್ವರ ಅವರು, ಪ್ರಚಾರ ಕಾರ್ಯದಿಂದ ವಿರಾಮ ಪಡೆದುಕೊಂಡಿದ್ದಾರೆ.

ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ದುಷ್ಕರ್ಮಿಯೊಬ್ಬ ಕಲ್ಲು ತೂರಾಟ ನಡೆಸಿದ್ದರಿಂದ ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರ ತಲೆಗೆ ಆಳವಾದ ಗಾಯವಾಗಿತ್ತು.

ಹೂವಿನ ಸುರಿಮಳೆಯಾಗುತ್ತಿದ್ದ ಸಂದರ್ಭದಲ್ಲಿ ತಲೆ ಮೇಲೆ ಕಲ್ಲು ಬಿದ್ದ ಅನುಭವವಾಯಿತು. ಯಾರೋ ದುಷ್ಕರ್ಮಿಗಳು ನನಗೆ ಕಲ್ಲಿನಿಂದ ಹೊಡೆದಿರಬಹುದು, ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ಗೊತ್ತಿಲ್ಲ. 35 ವರ್ಷದ ನನ್ನ ರಾಜಕೀಯ ಜೀವನದಲ್ಲಿ ನನಗೆ ಯಾರೂ ಶತ್ರುಗಳು ಇಲ್ಲ ಎಂದು ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ಹೇಳುವುದು ಕಷ್ಟ. ನನಗೆ ಶತ್ರುಗಳು ತುಂಬಾ ಕಡಿಮೆ ಎಂದುಕೊಂಡಿದ್ದೇನೆ. ಪ್ರಾಮಾಣಿಕವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಚುನಾವಣೆ ಎನ್ನುವುದು ಜನರ ತೀರ್ಪು, ಅದನ್ನು ಜನರಿಗೆ ಬಿಡಬೇಕು. ಜನರ ಬಳಿ ಹೋಗಿ ಮತ ಕೇಳುತ್ತೇವೆ, ಆಶ್ವಾಸನೆ ನೀಡುತ್ತೇವೆ, ಮಾಡಿರುವ ಕೆಲಸದ ಬಗ್ಗೆ ಹೇಳಿಕೊಳ್ಳುತ್ತೇವೆ, ಇಷ್ಟು ಬಿಟ್ಟರೆ ಬೇರೆ ಯಾವುದು ನಡೆಯಬಾರದು ಎಂದು ತಿಳಿಸಿದ್ದಾರೆ.

ಒಂದು ವೇಳೆ ನನ್ನ ಮೇಲೆ ದ್ವೇಷ ಇದ್ದರೆ ಈ ರೀತಿ ಸಾರ್ವಜನಿಕ ಜೀವನದಲ್ಲಿ ಅದನ್ನು ತೀರಿಸಿಕೊಳ್ಳಬಾರದು. ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ, ಇದು ಹೂವಿನಲ್ಲಿ ಬಂದಿರುವ ಕಲ್ಲು ಅಲ್ಲ, ಪೆಟ್ಟು ತಿಂದವನು ನನಗೆ ಗೊತ್ತಾಗುತ್ತದೆ. ಯಾರೋ ಬೇಕೆಂದೆ ಮಾಡಿದ್ದಾರೆ ಎನಿಸುತ್ತದೆ. ಈ ಘಟನೆ ಕುರಿತಂತೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ನಡುವೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮತ್ತಿತರರು ಪರಮೇಶ್ವರ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಷಡ್ಯಂತ್ರಗಳ ರೂಪಿಸಲಾಗಿದೆ ಎಂದು ಹೇಳಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಕೋರಿ ಬಿಜೆಪಿ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದು, ಬಿಜೆಪಿ ಅದನ್ನು ಬಳಸಿಕೊಂಡು ಅಶಾಂತಿ ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

ಈ ನಡುವೆ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗವನ್ನು ಸಂಪರ್ಕಿಸುತ್ತೇವೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com