ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ 34,293 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

2023-24ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪಂಗಡದ ಉಪ ಯೋಜನೆ (ಟಿಎಸ್‌ಪಿ) ಅಡಿ 34,293.69 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸೋಮವಾರ ಅನುಮೋದನೆ ನೀಡಲಾಗಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಎಸ್‌ಸಿಎಸ್‌ಟಿ/ಟಿಎಸ್‌ಪಿ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಭಾಗವಹಿಸಿದ್ದರು.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಎಸ್‌ಸಿಎಸ್‌ಟಿ/ಟಿಎಸ್‌ಪಿ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಭಾಗವಹಿಸಿದ್ದರು.
Updated on

ಬೆಂಗಳೂರು: 2023-24ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪಂಗಡದ ಉಪ ಯೋಜನೆ (ಟಿಎಸ್‌ಪಿ) ಅಡಿ 34,293.69 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸೋಮವಾರ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್.ಸಿ.ಎಸ್.ಪಿ./ ಟಿಎಸ್.ಪಿ. ಅನುದಾನ ಖರ್ಚು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದೆ. ಅದರಂತೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ, ಅವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ಇಲಾಖೆಯು ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಯೋಜನೆಗಳ ಅನುಷ್ಠಾನದ ನಂತರ ಪರಿಣಾಮದ ಮೌಲ್ಯಮಾಪನ ವರದಿಯನ್ನೂ ಸಿದ್ಧಪಡಿಸಿ, ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ಧಿಗಾಗಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅನಿಯಮ 2013 ಮತ್ತು ನಿಯಮ 2017 ನ್ನು ಜಾರಿಗೆ ತರಲಾಗಿದೆ. ಇದರನ್ವಯ ಅಭಿವೃದ್ಧಿ ಯೋಜನೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ಶೇ. 24.10 ರಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ ಒದಗಿಸಲಾಗುತ್ತಿದೆ. ಈ ಯೋಜನೆಯ ಅನುದಾನ ನೇರವಾಗಿ ಈ ಸಮುದಾಯಗಳಿಗೇ ತಲುಪಬೇಕು ಎಂಬ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿದೆ. ಆದ್ದರಿಂದ ಈ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಒಟ್ಟು ಆಯವ್ಯಯ ಗಾತ್ರ 3.28 ಲಕ್ಷ ಕೋಟಿ ರೂ. ಆಗಿದ್ದು, ಇದರಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಗದಿ ಪಡಿಸಿದ ಆಯವ್ಯಯ 1.42 ಲಕ್ಷ ಕೋಟಿ ರೂ. ನಷ್ಟಿದೆ. ಇದರಲ್ಲಿ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಗೆ ಶೇ. 24.10 ಅನುದಾನ ಅಂದರೆ ಒಟ್ಟು 34,221.49 ಕೋಟಿ ರೂ. ಹಾಗೂ ಹಿಂದಿನ ವರ್ಷ ಬಳಕೆಯಾಗದ ಮೊತ್ತ 72.20 ಕೋಟಿ ರೂ. ಸೇರಿಸಿ, 34,293.69 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಶೇ. 84 ರಾಜಸ್ವ ಹಾಗೂ ಶೇ. 16 ಬಂಡವಾಳ ಮೇಲಣ ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.

2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಅಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5790.67 ಕೋಟಿ , ಇಂಧನ ಇಲಾಖೆಗೆ 5400.98 ಕೋಟಿ ರೂ., ಕಂದಾಯ ಇಲಾಖೆಗೆ 4041.78 ಕೋಟಿ ರೂ., ಪರಿಶಿಷ್ಟ ಜಾತಿ ಕಲ್ಯಾಣಕ್ಕೆ 3787.29 ಕೋಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 2779.97 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಲಾಖೆಗೆ 2349.85 ಕೋಟಿ ರೂ., ವಸತಿ ಇಲಾಖೆಗೆ 1431.5 ಕೋಟಿ ರೂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 1387.35 ಕೋಟಿ ರೂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 1296.96 ಕೋಟಿ ರೂ., ಆರೋಗ್ಯ ಇಲಾಖೆಗೆ 1122.25 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಮುಂದುವರೆದ ಯೋಜನೆಗಳಿಗೆ 1897 ಕೋಟಿ ರೂ. ಈ ವರೆಗೆ ವೆಚ್ಚ ಮಾಡಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಇಂದು ಅನುಮೋದಿಸಲಾದ ಕ್ರಿಯಾ ಯೋಜನೆಯನ್ವಯ ಯೋಜನೆ ಅನುಷ್ಠಾನ ಮಾಡಿ, 34293.69 ಕೋಟಿ ರೂ. ಅನುದಾನ ಸಂಪೂರ್ಣ ವೆಚ್ಚ ಮಾಡಬೇಕು ಎಂದು ಸೂಚಿಸಲಾಯಿತು.

ಅನುದಾನದ ಸಂಪೂರ್ಣ ಸದ್ಬಳಕೆಗಾಗಿ ಅನುಮೋದಿಸಿದ ಕ್ರಿಯಾ ಯೋಜನೆಯಂತೆ ಅನುಷ್ಠಾನಗೊಳಿಸಲಾಗುವುದು. ಸಂಬಂಧಿಸಿದ ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅನುದಾನ ಉಳಿದರೆ, ಅದರ ಮರು ಹಂಚಿಕೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಜನಾ ಉಸ್ತುವಾರಿ ಕೋಶ ರಚನೆ ಪ್ರಸ್ತಾವನೆ ಮಾಡಲಾಗಿತ್ತು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳ ಅತ್ಯುತ್ತಮ ನಿರ್ವಹಣೆಗೆ ರೇಣುಕಾ ಚಿದಂಬರಂ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಗಣಿಸುವಂತೆ ಪರಿಷತ್‍ನ ಸದಸ್ಯರು ಸಲಹೆ ನೀಡಿದರು.

ಇದರಲ್ಲಿ ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶ. ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 60 ಹಾಗೂ ಹೊರಗಿನ ವಿದ್ಯಾರ್ಥಿಗಳಿಗೆ ಶೇ. 40 ರಷ್ಟು ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲು ಸೂಚಿಸಲಾಯಿತು. ಪರಿಶಿಷ್ಟ ಜಾತಿ, ಪಂಗಡದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸಬೇಕು. ಯಾವುದೇ ಕಾರಣಕ್ಕೆ ದಲಿತರ ಮಕ್ಕಳು. ವಿದ್ಯೆಯಿಂದ ವಂಚಿತರಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com