ಎಕ್ಸ್‌ಪ್ರೆಸ್‌ ವೇಯಲ್ಲಿ ಬೈಕ್, ಆಟೋ ನಿಷೇಧ: ಮೊದಲ ದಿನವೇ 137 ಕೇಸ್; ಬರೋಬ್ಬರೀ 68 ಸಾವಿರ ರೂ ದಂಡ ವಸೂಲಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಮತ್ತು ಕೃಷಿ ವಾಹನಗಳ ನಿಷೇಧದ ಮೊದಲ ದಿನ, ಪೊಲೀಸರು 137 ಪ್ರಕರಣಗಳನ್ನು ದಾಖಲಿಸಿ ಬರೋಬ್ಬರೀ 68,500 ರೂ ದಂಡ ವಸೂಲಿ ಮಾಡಿದ್ದಾರೆ.
ಇ ವೇ ನಲ್ಲಿ ಆಟೋ ಬೈಕ್ ನಿಷೇಧ
ಇ ವೇ ನಲ್ಲಿ ಆಟೋ ಬೈಕ್ ನಿಷೇಧ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಮತ್ತು ಕೃಷಿ ವಾಹನಗಳ ನಿಷೇಧದ ಮೊದಲ ದಿನ, ಪೊಲೀಸರು 137 ಪ್ರಕರಣಗಳನ್ನು ದಾಖಲಿಸಿ ಬರೋಬ್ಬರೀ 68,500 ರೂ ದಂಡ ವಸೂಲಿ ಮಾಡಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್, ಆಟೋ ಹಾಗೂ ಟ್ರ್ಯಾಕ್ಟರ್ ಸೇರಿ ಇತರ ವಾಹನಗಳಿಗೆ ಆ.1ರಿಂದ ನಿಷೇಧ ಹೇರಲಾಗಿದೆ. ಆದರೂ ಜನ ಇದನ್ನು ಲೆಕ್ಕಿಸದೇ ಈ ವಾಹನಗಳನ್ನು ಎಕ್ಸ್‌ಪ್ರೆಸ್‌ವೆಗೆ ಇಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ತೀವ್ರ ತಪಾಸಣೆ ನಡೆಸಿ ಮೊದಲ ದಿನವೇ 137 ನಿಯಮ ಉಲ್ಲಂಘನೆ ಕೇಸ್ ದಾಖಲಿಸಿಕೊಂಡು 68,500 ರೂ. ದಂಡ ವಸೂಲಿ ಮಾಡಿದ್ದಾರೆ.

ರಾಮನಗರದ 9 ಎಂಟ್ರಿ ಹಾಗೂ ಎಕ್ಸಿಟ್‍ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ ಹೆದ್ದಾರಿಯಲ್ಲಿ ಬಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ದಂಡ ವಿಧಿಸಿದ್ದಾರೆ. ಬಳಿಕ ದಂಡ ಕಟ್ಟಿದ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ಇಂದು ಸಹ ಪೊಲೀಸರು ಹೆದ್ದಾರಿಯಲ್ಲಿ ನಿಗಾ ವಹಿಸಲಿದ್ದಾರೆ.

ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದ್ದರು. ದಶಪಥ ಹೆದ್ದಾರಿ ಉದ್ಘಾಟನೆ ಆದಾಗಿನಿಂದ ಹಲವಾರು ಅಪಘಾತಗಳು ನಡೆದಿದ್ದವು. ಈ ಅಪಘಾತದಲ್ಲಿ ಜೀವ ಹಾನಿ ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯಲು ಬೈಕ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿಷೇಧಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನವನ್ನು ನಿಷೇಧಿಸಿ ಆದೇಶ ಪ್ರಕಟಿಸಿದೆ.

ಅನೇಕ ದ್ವಿಚಕ್ರ ವಾಹನ ಸವಾರರು ಪಂಚಮುಖಿ ಗಣೇಶ ದೇವಸ್ಥಾನದ ಬಳಿ ನೈಸ್ ರಸ್ತೆ ಜಂಕ್ಷನ್ ನಂತರ ನಗರದ ಹೊರವಲಯದಲ್ಲಿ ಪ್ರಾರಂಭವಾಗುವ ಇ-ವೇ ಪ್ರವೇಶಿಸಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ಮತ್ತು ಎನ್‌ಎಚ್‌ಎಐ ಸಿಬ್ಬಂದಿ ತಡೆದು ಸರ್ವೀಸ್ ರಸ್ತೆಗೆ ತೆರಳುವಂತೆ ಹೇಳಿದರು.

ಬೆಳಿಗ್ಗೆ 8 ಗಂಟೆಯಿಂದಲೇ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ನಿರ್ಬಂಧಿತ ವಾಹನಗಳು ಎಕ್ಸ್‌ಪ್ರೆಸ್ ವೇ ಪ್ರವೇಶಿಸದಂತೆ ನೋಡಿಕೊಂಡರು. ಸವಾರರಿಗೆ ಮಾಹಿತಿ ನೀಡಲು ಹೆದ್ದಾರಿಯ ಅಲ್ಲಲ್ಲಿ ಪ್ರವೇಶ ನಿರ್ಬಂಧ ಪೋಸ್ಟರ್‌ ಹಾಕಲಾಗಿತ್ತು.

‘ಪ್ರವೇಶ ನಿರ್ಬಂಧ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ, ಮೊದಲ ದಿನ ಹೆದ್ದಾರಿ ಪ್ರವೇಶಿಸಲು ಮುಂದಾದವರಿಗೆ ಪ್ರವೇಶ ಸ್ಥಳದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಎಚ್ಚರಿಕೆ ನೀಡಿ‌, ಸರ್ವೀಸ್ ರಸ್ತೆಯಲ್ಲಿ ಕಳಿಸಿದರು. ಅದನ್ನು ಮೀರಿಯೂ ಹೆದ್ದಾರಿ ಪ್ರವೇಶಿಸಿದವರಿಗೆ ನಿರ್ಗಮನ ಸ್ಥಳಗಳಲ್ಲಿ 500 ದಂಡ ಹಾಕಲಾಯಿತು.

ದ್ವಿಚಕ್ರ ವಾಹನಗಳು ಹಾಗೂ ಇತರೆ ವಾಹನಗಳಿಗೆ ಸರ್ವಿಸ್ ರಸ್ತೆ ಬಳಸುವಂತೆ ಕೇಳುತ್ತಿದ್ದಾರೆ. ಆದರೆ ಸರ್ವೀಸ್ ರಸ್ತೆ ಎಲ್ಲಿದೆ? ಇ-ವೇ ಚನ್ನಪಟ್ಟಣದಂತಹ ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಸರ್ವೀಸ್ ರಸ್ತೆ ಎತ್ತರಿಸಿದೆ. ಮುಖ್ಯ ರಸ್ತೆಗೆ ಸಮಾನಾಂತರವಾಗಿ ನಿರಂತರ ಸರ್ವಿಸ್ ರಸ್ತೆಯನ್ನು ನೀಡಬೇಕಾಗಿತ್ತು ಎಂದು ಬೈಕ್ ಸವಾರ ಪ್ರಕಾಶ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com