ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗಿದ್ದು, 5 ಗ್ಯಾರಂಟಿಗಳ ಜೊತೆಗೆ ಕೊಟ್ಟಿರುವ ಎಲ್ಲಾ ಭರವಸೆಗಳನ್ನೂ ಈಡೇರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಇದೀಗ ದೇಶಕ್ಕೆ ಹೆಸರುವಾಸಿಯಾಗುತ್ತಿದ್ದು, 5 ಗ್ಯಾರಂಟಿ ಯೋಜನೆಗಳ ಜೊತೆಗೆ ಕೊಟ್ಟಿರುವ ಎಲ್ಲಾ ಭರವಸೆಗಳನ್ನೂ ಈಡೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಕಲಬುರಗಿ: ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಇದೀಗ ದೇಶಕ್ಕೆ ಹೆಸರುವಾಸಿಯಾಗುತ್ತಿದ್ದು, 5 ಗ್ಯಾರಂಟಿ ಯೋಜನೆಗಳ ಜೊತೆಗೆ ಕೊಟ್ಟಿರುವ ಎಲ್ಲಾ ಭರವಸೆಗಳನ್ನೂ ಈಡೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಕಲಬುರಗಿ ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 10 ಜನ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸುವ ಮೂಲಕ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಕುಟುಂಬಕ್ಕೆ ಮಾಸಿಕ-200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಚುನಾವಣಾ ಪ್ರಚಾರದ ವೇಳೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಮುಂದಿನ 5 ವರ್ಷಗಳಲ್ಲಿ ಈಡೇರಿಸುತ್ತೇವೆಂದು ಭರವಸೆ ನೀಡಿದರು.

ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿದ್ದೆವು, ಈ 165 ಭರವಸೆಗಳಲ್ಲಿ 158 ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಈಗ, ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳ ಜಾರಿಗೊಳಿಸುವುದರ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಲಾದ ಎಲ್ಲಾ ಭರವಸೆಗಳನ್ನೂ 5 ವರ್ಷಗಳಲ್ಲಿ ಈಡೇರಿಸಲಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಬಜೆಟ್‌ನಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5 ಸಾವಿರ ಕೋಟಿ ರೂ. ಗಳನ್ನೂ ಘೋಷಿಸಿದೆ. ಮಂಡಳಿಯೂ ಸಂಪೂರ್ಣವನ್ನು ಖರ್ಚು ಮಾಡಿದರೆ ಮತ್ತು ಹೆಚ್ಚುವರಿ ಹಣದ ಅಗತ್ಯವಿದ್ದರೆ, ಅದನ್ನೂ ಖಂಡಿತವಾಗಿಯೂ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಕರ್ನಾಟಕವನ್ನು ದಿವಾಳಿ ಮಾಡಲಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷ ಅಥವಾ ಕಾಂಗ್ರೆಸ್ ಸರ್ಕಾರ ರಾಜ್ಯ ಅಥವಾ ದೇಶವನ್ನು ದಿವಾಳಿ ಮಾಡುವುದಿಲ್ಲ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾಪ ಬಡ ಜನರನ್ನು ಲೂಟಿ ಮಾಡುತ್ತಿದೆ ಮತ್ತು ಕಾರ್ಪೊರೇಟ್ ವಲಯಕ್ಕೆ ಸಹಾಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಹಿಂದಿನ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದು ಬಿಟ್ಟರೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಏನನ್ನೂ ಮಾಡಿಲ್ಲ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com