ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ವರದಿಯಿಂದ ತೃಪ್ತವಾಗಿಲ್ಲದ ಕರ್ನಾಟಕ ಹೈಕೋರ್ಟ್ ಮಂಗಳವಾರ ಸ್ಥಳೀಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ಮೂರು ವಾರಗಳಲ್ಲಿ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಸ್ಥಿತಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ವರದಿಯಿಂದ ತೃಪ್ತವಾಗಿಲ್ಲದ ಕರ್ನಾಟಕ ಹೈಕೋರ್ಟ್ ಮಂಗಳವಾರ ಸ್ಥಳೀಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ಮೂರು ವಾರಗಳಲ್ಲಿ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳ ಸ್ಥಿತಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠವು, 'ಲೆಟ್ಜ್‌ಕಿಟ್ ಫೌಂಡೇಶನ್' ಸಲ್ಲಿಸಿದ 2020ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿತು. 

ಹೈಕೋರ್ಟ್‌ನ ಹಿಂದಿನ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಫಿಡವಿಟ್ ಬದಲಿಗೆ ಕ್ರಮ ತೆಗೆದುಕೊಂಡ ವರದಿಯನ್ನು ಸಲ್ಲಿಸಿತ್ತು. ಆ ವರದಿಯಲ್ಲಿ ವಿವರಗಳ ಕೊರತೆಯಿರುವುದನ್ನು ನ್ಯಾಯಾಲಯ ಗಮನಿಸಿದೆ.

ಬಿಬಿಎಂಪಿಯ ನಿಷ್ಕ್ರಿಯತೆ ಮತ್ತು ಸರ್ಕಾರದ ಮೌನದ ಬಗ್ಗೆ ನಿರ್ಣಾಯಕ ನಿಲುವನ್ನು ತೆಗೆದುಕೊಂಡ ನ್ಯಾಯಾಲಯ, ಸರ್ಕಾರವು ಸಾರ್ವಜನಿಕರ ಅಗತ್ಯಗಳಿಗೆ ಮೂಕಪ್ರೇಕ್ಷಕನಾಗಿ ವರ್ತಿಸಲು ಸಾಧ್ಯವಿಲ್ಲ. ಕಣ್ಣು ಮತ್ತು ಬಾಯಿ ಮುಚ್ಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಸ್ವಚ್ಛ ಮತ್ತು ನೈರ್ಮಲ್ಯದ ಸಾರ್ವಜನಿಕ ಶೌಚಾಲಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಮತ್ತು ಅದು ತನ್ನ ಕರ್ತವ್ಯದಿಂದ ದೂರವಿರಬಾರದು ಎಂದು ನ್ಯಾಯಾಲಯ ಹೇಳಿದೆ.

ಈ ಅವಲೋಕನಗಳನ್ನು ಮಾಡಲು ನ್ಯಾಯಾಲಯಕ್ಕೆ ಉತ್ತೇಜನ ನೀಡಿದ ಪಿಐಎಲ್‌ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಂಗವಿಕಲರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಹಲವೆಡೆ ಮಹಿಳೆಯರ ಶೌಚಾಲಯದ ಕಿಟಕಿಗಳು ಒಡೆದಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ಹಿಂದೆ ಏಪ್ರಿಲ್ 6 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಬಿಬಿಎಂಪಿ ವರದಿ ಸಲ್ಲಿಸಿತ್ತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್ಎಲ್ಎಸ್ಎ) ಸಾರ್ವಜನಿಕ ಶೌಚಾಲಯಗಳ ಕೊರತೆಗಳು ಮತ್ತು ಸೇವೆಗಳನ್ನು ಸುಧಾರಿಸಲು ಬಿಬಿಎಂಪಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಿದೆ.

ಕೆಎಸ್ಎಲ್ಎಸ್ಎ ನೀಡಿರುವ ಕ್ರಮಗಳು, ಸಲಹೆಗಳು ಮತ್ತು ಅವಲೋಕನಗಳನ್ನು ಪರಿಶೀಲಿಸಲಾಗುವುದು ಮತ್ತು ಎಲ್ಲಾ ನ್ಯೂನತೆಗಳನ್ನು ಆರು ವಾರಗಳಲ್ಲಿ ಸರಿಪಡಿಸಲಾಗುವುದು ಎಂದು 2021ರಲ್ಲಿ ಬಿಬಿಎಂಪಿ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com