ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ: ವಿಪಕ್ಷ, ರೈತರಿಗೆ ಡಿಕೆಶಿ ಮನವಿ

ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕರು ಹಾಗೂ ರೈತರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕರು ಹಾಗೂ ರೈತರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಬಿಜೆಪಿ ಮುಖಂಡರು ಮತ್ತು ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ತಮಿಳುನಾಡು 27 ಟಿಎಂಸಿ ಅಡಿ ನೀರು ಕೇಳಿದೆ. ನಮ್ಮ ಇಚ್ಛೆಯಂತೆ ವಿಷಯಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕಾನೂನು ತಜ್ಞರ ಸಲಹೆಯನ್ನು ಪಾಲಿಸಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ಆಗ್ರಹಗಳನ್ನು ನ್ಯಾಯಾಲಯ ಕೇಳುವುದಿಲ್ಲ. ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತ್ತು. ಸರ್ಕಾರವನ್ನು ನಡೆಸುವವರು ಎಲ್ಲಾ ಅಂಶಗಳ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ನಾವು ಕಾನೂನು ತಜ್ಞರ ಅಭಿಪ್ರಾಯದಂತೆ ನಡೆಯಬೇಕಾಗುತ್ತದೆ. ಇಲ್ಲದಿದ್ದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಸಂಘರ್ಷಗಳಿಗೆ ಇಳಿಯುವುದು ವಿವೇಕವೇ? ಎಂದು ಪ್ರಶ್ನಿಸಿದ್ದಾರೆ.

ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ, ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಬೆಳೆಗಳನ್ನು ರಕ್ಷಿಸಲು ಎರಡು ಬಾರಿ ನೀರು ಬಿಡಲು ಅವಕಾಶ ನೀಡಿದ್ದೆ. ಮುಂಗಾರು ದುರ್ಬಲಗೊಂಡಿರುವುದರಿಂದ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳು ಒಳಹರಿವು ಕಡಿಮೆಯಾಗಿದೆ. ಇಂತಹ ಸಂಕಷ್ಟದಲ್ಲಿಯೂ ನಾವು ರೈತರೊಂದಿಗೆ ಇದ್ದೇವೆ. ಕಾನೂನನ್ನು ಗೌರವಿಸಬೇಕು ಎಂಬ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.

ರೈತರು ಪ್ರತಿಭಟನೆ ನಡೆಸಲು ಮುಂದಾದರೆ, ಅದು ಅವರ ಹಕ್ಕು. ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದ್ದಾರೆ.

ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ, ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆಯನ್ನು ಆಧರಿಸಿ ತಮಿಳುನಾಡಿಗೆ ನೀರು ಬಿಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com