
ಸಂಗ್ರಹ ಚಿತ್ರ
ಮಂಗಳೂರು: ಸೈಬರ್ ವಂಚಕರ ಕಪಿಮುಷ್ಠಿಗೆ ಸಿಲುಕಿದ ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.
ದಕ್ಷಿಣ ಕನ್ನಡದ ಕಡಬ ತಾಲೂಕಿನ ಮುಜೂರು ಗ್ರಾಮದ ಚಂದ್ರಶೇಖರ ಎಂಕೆ (33) ಎಂಬುವರು ಕಳೆದ ಎಂಟು ತಿಂಗಳಿಂದ ಸೌದಿ ಅರೇಬಿಯಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣದ ವಹಿವಾಟು ನಡೆಸಿದ್ದಾರೆಂದು ಆರೋಪಿಸಲಾಗುತ್ತಿದೆ.
ಈ ಕುರಿತ ಸಾಮಾಜಿಕ ಕಾರ್ಯಕರ್ತ ಶ್ರೀಧರ ಗೌಡ ಅವರು ಮಾಹಿತಿ ನೀಡಿದ್ದಾರೆ. ರಿಯಾದ್‌ನಲ್ಲಿ ಅಲ್ ಫನಾರ್ ಕೋನಲ್ಲಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಲು ಅಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದು, ಖರೀದಿ ವೇಳೆ ಅಂಗಡಿಯವನು ಎರಡು ಬಾರಿ ಹೆಬ್ಬೆರಳಿನ ಗುರುತನ್ನು ಪಡೆದುಕೊಂಡಿದ್ದಾನೆ. ಈ ವೇಳೆ ಚಂದ್ರಶೇಖ ಅವರ ಮೊಬೈಲ್ ಫೋನ್'ಗೆ ಅರೇಬಿಕ್ ಭಾಷೆಯಲ್ಲಿ ಸಂದೇಶ ಬಂದಿದೆ. ಈ ವೇಳೆ ವ್ಯಕ್ತಿ ಚಂದ್ರಶೇಖರ್ ಅವರಿಂದ ಒಟಿಪಿ ಕೇಳಿದ್ದಾನೆ. ಹಿಂದೂ ಮುಂದು ಆಲೋಚನೆ ಮಾಡದೆ ಚಂದ್ರಶೇಖರ್ ಅವರು ಒಟಿಪಿ ಹಂಚಿಕೊಂಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಸೌದಿ ಅರೇಬಿಯಾ ಪೊಲೀಸರು 22,000 ರೂ. (ಅಂದಾಜು 4.87 ಲಕ್ಷ ರೂ.) ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಚಂದ್ರಶೇಖರ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ: ಹಿಂಸಾತ್ಮಕ ಪ್ರಕರಣಗಳಲ್ಲಿ ಇಳಿಕೆ, ಸೈಬರ್-ಆರ್ಥಿಕ ಕ್ರೈಂಗಳಲ್ಲಿ ಹೆಚ್ಚಳ: ಡಿಜಿ-ಐಜಿಪಿ ಅಲೋಕ್ ಮೋಹನ್ (ಸಂದರ್ಶನ)
ವಂಚಕರು ಚಂದ್ರಶೇಖರ್ ಅವರ ದಾಖಲೆಗಳನ್ನು ಬಳಸಿಕೊಂಡು, ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ, ಈ ಬಗ್ಗೆ ರಿಯಾದ್‌ನಲ್ಲಿರುವ ತನ್ನ ಸ್ನೇಹಿತರ ಮೂಲಕ ಚಂದ್ರಶೇಖರ್ ಅವರಿಗೆ ಮಾಹಿತಿ ತಿಳಿದುಬಂದಿದೆ.
ಚಂದ್ರಶೇಖರ ಅವರ ವಿವಾಹವು ಜನವರಿಯಲ್ಲಿ ನಿಗದಿಯಾಗಿತ್ತು. ಬಂಧನದಿಂದಾಗಿ ಅದನ್ನು ರದ್ದುಗೊಳಿಸಲಾಯಿತು. ವಂಚಕರು ರಿಯಾದ್‌ನಲ್ಲಿರುವ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ SR 22,000 ಅನ್ನು ಚಂದ್ರಶೇಖರ್ (ವಂಚನೆಯಿಂದ ತೆರೆಯಲಾದ ಖಾತೆ) ಖಾತೆಗೆ ವರ್ಗಾಯಿಸಿದ್ದಾರೆ.
ಬಳಿಕ ಆ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಲಾಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ ಎಂದು ಶ್ರೀಧರ್ ಗೌಡ ಅವರು ಹೇಳಿದ್ದಾರೆ.
ಇದೀಗ ಚಂದ್ರಶೇಖರ ಅವರ ತಾಯಿ ಹೇಮಾವತಿ ಅವರು, ತಮ್ಮ ಮಗನನ್ನು ಸೌದಿ ಜೈಲಿನಿಂದ ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಜಿಲ್ಲಾಡಳಿತ, ಸ್ಥಳೀಯ ಸಂಸದರು ಮತ್ತು ಶಾಸಕರು ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಕಲಿ ಇನ್‌ಸ್ಟಾಗ್ರಾಮ್ ಐಡಿ ಸೃಷ್ಟಿಸಿ ನಗ್ನ ವಿಡಿಯೋ ಪೋಸ್ಟ್: ಬಾಲಕಿ ವಿರುದ್ಧ ಪ್ರಕರಣ ದಾಖಲು
ಚಂದ್ರಶೇಖರ ಅವರನ್ನು ಶೀಘ್ರ ಬಿಡುಗಡೆ ಮಾಡುವಂತೆ ನಾವು ಕೂಡ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಮನವಿ ಮಾಡುತ್ತಿದ್ದೇವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ವಿಚಾರವನ್ನು ವಿದೇಶಾಂಗ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ರಿಯಾದ್‌ನಲ್ಲಿರುವ ಚಂದ್ರಶೇಖರ ಅವರ ಸ್ನೇಹಿತರು ಪ್ರಕರಣದ ವಿರುದ್ಧ ಹೋರಾಡಲು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಹೋರಾಟಗಾರ ಶಶಿಧರ ಶೆಟ್ಟಿ ಮಾತನಾಡಿ, ಚಂದ್ರಶೇಖರ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗುವುದು ಎಂದು ಹೇಳಿದ್ದಾರೆ.