
ಟೆಕ್ಕಿ ದಂಪತಿ, ಮಗು
ದಾವಣಗೆರೆ: ದಾವಣಗೆರೆ ಮೂಲದ ದಂಪತಿ ಹಾಗೂ ಮಗು ದೂರದ ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ಕಳೆದ 9 ವರ್ಷಗಳಿಂದ ವಾಸವಿದ್ದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ (37), ಪ್ರತಿಭಾ (35) ಹಾಗೂ ಪುತ್ರ ಯಶ್ (6) ಶನಿವಾರ ಮೃತಪಟ್ಟಿದ್ದರು.
ಈ ಸಾವಿಗೆ ನಿಖರ ಕಾರಣ ಬಹಿರಂಗವಾಗಿರಲಿಲ್ಲ. ಆದರೆ, ಈಗ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದ್ದು, ಯೋಗೇಶ್ ತನ್ನ ಪತ್ನಿ ಹಾಗೂ ಮಗುವಿಗೆ ಗುಂಡು ಹಾರಿಸಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ.
ಪತಿ-ಪತ್ನಿ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಆರು ವರ್ಷದ ಮಗುವಿನೊಂದಿಗೆ ಬಾಲ್ಟಿಮೋರ್‌ನಲ್ಲಿ ವಾಸವಿದ್ದರು. ಹೊರದೇಶದಲ್ಲಿ ಒಂದಷ್ಟು ಸಂಪಾದನೆ ಮಾಡಿ ಮರಳಿ ಭಾರತಕ್ಕೆ ಬರುವ ಆಶಯ ಇಟ್ಟುಕೊಂಡಿದ್ದ ದಂಪತಿ ಈಗ ಈ ರೀತಿ ನಿಗೂಢವಾಗಿ ಸಾವನ್ನಪ್ಪಿರುವುದು ಕುಟುಂಬದವರಿಗೆ ದುಃಖ ಮಡುಗಟ್ಟುವಂತೆ ಮಾಡಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ಮೂಲದ ಟೆಕ್ಕಿ ದಂಪತಿ, ಮಗು ನಿಗೂಢ ಸಾವು
ಬಾಲ್ಟಿಮೋರ್ ಕೌಂಟಿ ಪೊಲೀಸ್ ವಕ್ತಾರ ಆಂಥೋನಿ ಶೆಲ್ಟನ್ ಅವರು ಮಾತನಾಡಿ, ಪ್ರಕರಣವು ಜೋಡಿ ಕೊಲೆ ಹಾಗೂ ಆತ್ಮಹತ್ಯೆ ಎಂಬಂತೆ ತೋರುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಖಚಿತ ಮಾಹಿತಿಗಳು ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಮೂವರ ಸಾವು ಅತೀವ್ರ ನೋವು ತಂದಿದೆ. ಮೃತರ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡಲಾಗುತ್ತದೆ ಎಂದು ಬಾಲ್ಟಿಮೋರ್ ಕೌಂಟಿ ಎಕ್ಸಿಕ್ಯೂಟಿವ್ ಜಾನಿ ಓಲ್ಸ್ಜೆವ್ಸ್ಕಿ ತಿಳಿಸಿದ್ದಾರೆ.
ಈ ಮಧ್ಯೆ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು, ಭಾನುವಾರ ದಾವಣಗೆರೆಯ ವಿದ್ಯಾನಗರದಲ್ಲಿರುವ ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಮೃತದೇಹಗಳ ಸ್ವದೇಶಕ್ಕೆ ಕರೆತರಲು ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಘಟನೆ ಸಂಬಂಧ ಬಾಲ್ಟಿಮೋರ್ ಕೌಂಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.