ರಾಜ್ಯದ ಉರ್ದು ಶಾಲೆಗಳ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಲಿದ್ದಾರೆ ನಾಲ್ವರು ನಿವೃತ್ತ ಐಎಎಸ್ ಅಧಿಕಾರಿಗಳು!
ರಾಜ್ಯದ ಉರ್ದು ಶಾಲೆಗಳ ಸ್ಥಿತಿಗತಿ ಮತ್ತು ಸಮಸ್ಯೆಗಳನ್ನು ತಿಳಿಯಲು ‘ಅಂಜುಮನ್ ತಾರಖಿ ಉರ್ದು’ ಎಂಬ ಎನ್‌ಜಿಒ ಜತೆಗೂಡಿ ನಾಲ್ವರು ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಕೆಎಎಸ್ ಅಧಿಕಾರಿ ಸಮೀಕ್ಷೆ ನಡೆಸಲಿದ್ದಾರೆ.
Published: 26th August 2023 11:52 AM | Last Updated: 26th August 2023 12:03 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರಿ ಉರ್ದು ಶಾಲೆಗಳ ಸಂಖ್ಯೆ 5,000 ರಿಂದ 4,000ಕ್ಕೆ ಇಳಿದಿದ್ದು, ವಿದ್ಯಾರ್ಥಿಗಳು ಹೆಚ್ಚೆಚ್ಚು ಶಾಲೆ ಬಿಡುತ್ತಿದ್ದಾರೆ. 10ನೇ ತರಗತಿಗೆ ಬರುವುದರೊಳಗೆ ಸರ್ಕಾರಿ ಉರ್ದು ಶಾಲೆಗಳಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯುತ್ತಾರೆ. ಹೀಗಾಗಿ, ರಾಜ್ಯದ ಉರ್ದು ಶಾಲೆಗಳ ಸ್ಥಿತಿಗತಿ ಮತ್ತು ಸಮಸ್ಯೆಗಳನ್ನು ತಿಳಿಯಲು ‘ಅಂಜುಮನ್ ತಾರಖಿ ಉರ್ದು’ ಎಂಬ ಎನ್‌ಜಿಒ ಜತೆಗೂಡಿ ನಾಲ್ವರು ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಕೆಎಎಸ್ ಅಧಿಕಾರಿ ಸಮೀಕ್ಷೆ ನಡೆಸಲಿದ್ದಾರೆ.
ಮಾಜಿ ಐಎಎಸ್ ಅಧಿಕಾರಿಗಳಾದ ಅಜೀಜುಲ್ಲಾ ಬೇಗ್, ಅದೋನಿ ಸಲೀಂ, ಮೀರ್ ಅನೀಶ್ ಅಹಮದ್, ಸಲಾವುದ್ದೀನ್ ಮತ್ತು ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎ. ಖಾಲೀದ್ ಅವರಿಗೆ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಜವಾಬ್ದಾರಿಯನ್ನು ವಹಿಸಲಾಗಿದೆ.
ಕರ್ನಾಟಕ ಚಾಪ್ಟರ್‌ನ ಅಂಜುಮನ್ ತಾರಕ್ಕಿ ಉರ್ದು ಅಧ್ಯಕ್ಷ ಮೊಹಮ್ಮದ್ ಒಬೈದುಲ್ಲಾ ಷರೀಫ್, 'ಅಲ್ಪಸಂಖ್ಯಾತ ಸಮುದಾಯದ ಅನೇಕ ಮಕ್ಕಳು ಶಾಲೆಗಳಿಂದ ಹೊರಗುಳಿದಿರುವುದರಿಂದ ಸಮೀಕ್ಷೆಯ ಅಗತ್ಯ ತಿಳಿಯಿತು ಮತ್ತು ಕೋವಿಡ್-19ರ ನಂತರ ಇದರ ಸಂಖ್ಯೆಯು ಮತ್ತಷ್ಟು ಕ್ಷೀಣಿಸುತ್ತಿದೆ. ಕಳಪೆ ಮೂಲಸೌಕರ್ಯ ಮತ್ತು ಉರ್ದು ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯಿದೆ ಎಂಬ ಪೂರ್ವಭಾವಿ ಕಲ್ಪನೆಯಿಂದಾಗಿ ಮಕ್ಕಳು ಶಾಲೆ ಬಿಡುವಲ್ಲಿನ ಕೆಲವು ಕಾರಣಗಳಾಗಿವೆ ಎಂಬುದನ್ನು ಸಮಿತಿಯು ನಂಬುತ್ತದೆ ಎಂದರು.
ಸಮೀಕ್ಷೆಯ ಫಲಿತಾಂಶಗಳನ್ನು ಆಧರಿಸಿ, ಉರ್ದು ಶಾಲೆಗಳಲ್ಲಿನ ನ್ಯೂನತೆಗಳನ್ನು ನಿವಾರಿಸಲು ವರದಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳನ್ನು ಉರ್ದು ಶಾಲೆಗಳಿಗೆ ಮರಳಿ ಕರೆತರಲು ಎನ್‌ಜಿಒಗಳು, ಮಸೀದಿ ಸಮಿತಿಗಳು ಮತ್ತು ಸಮುದಾಯದ ವಿದ್ಯಾವಂತ ಯುವಕರು ಶಾಲೆಗಳ ಮೂಲಸೌಕರ್ಯಗಳನ್ನು ಸುಧಾರಿಸಲು, ಬಡ ಕುಟುಂಬಗಳಿಗೆ ಪಡಿತರ ವಿತರಿಸಲು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನು ನೀಡಲು ಕೆಲಸ ಮಾಡುತ್ತಿದ್ದಾರೆ ಎಂದು ಷರೀಫ್ ಹೇಳಿದರು.
'ನಮ್ಮ ಆರಂಭಿಕ ಅಧ್ಯಯನಗಳ ಪ್ರಕಾರ, ಸಮುದಾಯದ ಸುಮಾರು 15 ಲಕ್ಷ ಮಕ್ಕಳು ವಾರ್ಷಿಕವಾಗಿ ಶಾಲೆಗಳಿಗೆ ದಾಖಲಾಗುತ್ತಾರೆ. ಆದರೆ, ಅವರು 7ನೇ ತರಗತಿ ತಲುಪುವ ವೇಳೆಗೆ, ಅವರಲ್ಲಿ ಸುಮಾರು ಶೇ 50 ರಷ್ಟು ಮಕ್ಕಳು ಶಾಲೆಗಳನ್ನು ತೊರೆಯುತ್ತಾರೆ' ಎಂದು ತಿಳಿಸಿದರು.
ಟಿಎನ್ಐಇ ಜೊತೆಗೆ ಮಾತನಾಡಿದ ಸಮಿತಿ ಸದಸ್ಯ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಅದೋನಿ ಸಲೀಂ, 'ನಾವು ನಾಲ್ಕು ಕಂದಾಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೀದರ್, ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಕೈಗೊಂಡಿದ್ದೇವೆ. ವರದಿಯಲ್ಲಿ, ಉರ್ದು ಶಾಲೆಗಳ ಸ್ಥಿತಿಗತಿ ಮತ್ತು ವಿದ್ಯಾರ್ಥಿಗಳ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು, ಶಾಲೆ ಬಿಡುವುದು ಸೇರಿದಂತೆ ಇತರ ವಿಷಯಗಳನ್ನು ಸೇರಿಸಲಾಗುತ್ತದೆ. ನಂತರ ಈ ವರದಿಯನ್ನು ಶಾಲಾ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗುತ್ತದೆ' ಎಂದರು.