ಕಾವೇರಿ ವಿವಾದ: ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಸಿಡಬ್ಲ್ಯೂ‌ಆರ್ ಸಿ ಶಿಫಾರಸು

ತಮಿಳುನಾಡಿಗೆ ಮುಂದಿನ 15 ದಿನಗಳವರೆಗೂ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.
ಕೆಆರ್ ಎಸ್ ಜಲಾಶಯದಿಂದ ಕಾವೇರಿ ನೀರು ಹರಿಯುತ್ತಿರುವುದು ಸಾಂದರ್ಭಿಕ ಚಿತ್ರ
ಕೆಆರ್ ಎಸ್ ಜಲಾಶಯದಿಂದ ಕಾವೇರಿ ನೀರು ಹರಿಯುತ್ತಿರುವುದು ಸಾಂದರ್ಭಿಕ ಚಿತ್ರ

ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳವರೆಗೂ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.

ಇಂದು ವರ್ಚುಯಲ್ ಮೂಲಕ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಉಭಯ ರಾಜ್ಯಗಳ ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಮಳೆ ಪ್ರಮಾಣದ ಬಗ್ಗೆ ಚರ್ಚೆ ನಡೆಸಲಾಯಿತು. ಎರಡು ರಾಜ್ಯಗಳ ವಾಸ್ತವ ಪರಿಸ್ಥಿತಿ‌ ಲೆಕ್ಕಾಹಾಕಿ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸುವಂತೆ  ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.‌ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ಮತ್ತು ಕೇಂದ್ರ ಜಲ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಸಭೆಯಲ್ಲಾದ ಚರ್ಚೆಯ ಸಾರಂಶ:  ತಮಿಳುನಾಡು ಸಭೆಯ ಆರಂಭದಲ್ಲಿ ಮಳೆಯ ಕೊರತೆಯನ್ನು ಮಾನದಂಡವಾಗಿ ಪರಿಗಣಿಸಿ ಶೇ. 22 ರಷ್ಟು ಸಂಕಷ್ಟದ ಅಂಶವನ್ನು ಅನುಸರಿಸಬೇಕು, ಇನ್ನೂ 10 ದಿನಗಳ ಕಾಲ ಬಿಳಿಗೊಂಡ್ಲುವಿನಲ್ಲಿ 24,000 ಕ್ಯೂಸೆಕ್ಸ್  ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬೇಕೆಂದು ತಮಿಳುನಾಡು ಒತ್ತಾಯಿಸಿತು. 

<strong>ಸಿಡಬ್ಲ್ಯೂ ಆರ್ ಸಿ ಸಭೆಯ ಸಾರಾಂಶದ ಪ್ರತಿ</strong>
ಸಿಡಬ್ಲ್ಯೂ ಆರ್ ಸಿ ಸಭೆಯ ಸಾರಾಂಶದ ಪ್ರತಿ

ಆದರೆ, ತಮಿಳುನಾಡು ಬೇಡಿಕೆಯನನು ತಿರಸ್ಕರಿಸಿದ ಸಿಡಬ್ಲ್ಯೂಆರ್ ಸಿ 7,200 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಕರ್ನಾಟಕವನ್ನು ಒತ್ತಾಯಿಸಿತು. ಆದರೆ, ಇದನ್ನು ಕರ್ನಾಟಕ ನಿರಾಕರಿಸಿತು. ತಮಿಳುನಾಡು ನೀರಾವರಿಗೆ ನೀರು ಬಿಡುವ ಮೂಲಕ ಹೆಚ್ಚಿನ ಬಳಕೆಯಿಂದ ಸಂಗ್ರಹವನ್ನು ಖಾಲಿ ಮಾಡಿದೆ. ಇದಕ್ಕೆ ವಿಭಿನ್ನವಾಗಿ ಕರ್ನಾಟಕ ನೀರಾವರಿಗೆ ನೀರು ಬಿಡದೆ ತನ್ನ ಜಲಾಶಯಗಳಲ್ಲಿ ಸಂಗ್ರಹಣೆಯನ್ನು ಹೆಚ್ಚಿಸಿಕೊಂಡಿರುವ ಕ್ರಮಕ್ಕೆ ಕರ್ನಾಟಕಕ್ಕೆ ಯಾವ ರೀತಿಯ ಆದ್ಯತೆ ನೀಡಲಾಗುವುದು ಎಂದು ಸಮಿತಿಯನ್ನು ಒತ್ತಾಯಿಸಿತು.

ಸಮಿತಿಯು ಅಂತಿಮವಾಗಿ ಮುಂದಿನ 15 ದಿನಗಳವರೆಗೆ (29.08.20023 ರಿಂದ 12.09.2023) ಕರ್ನಾಟಕವು ಬಿಳಿಗೊಂಡ್ಲುವಿನ ನೀರು ಮಾಪಕ ಕೇಂದ್ರದಲ್ಲಿ 5,000 ಕ್ಯೂಸೆಕ್ಸ್ ನೀರಿನ ಹರಿವನ್ನು ಖಚಿತಪಡಿಸಲು ಶಿಫಾರಸು ಮಾಡಿತು.

ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ನೀಡಿರುವ ಸೂಚನೆಯನ್ನು ಮಾರ್ಪಾಡು ಮಾಡಲು ಕರ್ನಾಟಕಕ್ಕೆ ಮತ್ತೊಂದು ಅವಕಾಶವಿದೆ. ನಾಳೆ ಅತಿ ಮುಖ್ಯವಾದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಸಭೆ ದೆಹಲಿಯಲ್ಲಿ ನಡೆಯಲಿದೆ. ಆ ಸಭೆಯಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣವನ್ನು ತಗ್ಗಿಸಲು ಅವಕಾಶವಿದೆ. ಸೆಪ್ಟೆಂಬರ್ 1 ರಂದು ಸುಪ್ರೀಂಕೋರ್ಟ್ ನಲ್ಲಿ ಇದೇ ವಿಚಾರವಾಗಿ ವಿಚಾರಣೆ ನಡೆಯಲಿದೆ. ಅಷ್ಟರೊಳಗೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ‌ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿಯ ವರದಿಯನ್ನು ಸುಪ್ರೀಂಕೋರ್ಟ್ ಸಲ್ಲಿಸಬೇಕಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com