ಹಾಸನ: ಶಾರ್ಪ್ ಶೂಟರ್ ವೆಂಕಟೇಶ್ ನನ್ನು ತುಳಿದು ಸಾಯಿಸಿದ ಆನೆ; ಮೃತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ

ಹಾಸನ ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ 50ಕ್ಕೂ ಹೆಚ್ಚು ರಾಕ್ಷಸ ಆನೆಗಳಿಗೆ ಅರವಳಿಕೆ ಮದ್ದು ನೀಡಿದ್ದ ಶಾರ್ಪ್ ಶೂಟರ್ ವೆಂಕಟೇಶ್(64) ಅವರನ್ನು ಗುರುವಾರ ಗಾಯಗೊಂಡ ಆನೆಯೊಂದು ತುಳಿದು ಕೊಂದು ಹಾಕಿದೆ.
ಶಾರ್ಪ್ ಶೂಟರ್ ವೆಂಕಟೇಶ್ ಹಾಗೂ ಆನೆ
ಶಾರ್ಪ್ ಶೂಟರ್ ವೆಂಕಟೇಶ್ ಹಾಗೂ ಆನೆ
Updated on

ಹಾಸನ: ಹಾಸನ ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ 50ಕ್ಕೂ ಹೆಚ್ಚು ರಾಕ್ಷಸ ಆನೆಗಳಿಗೆ ಅರವಳಿಕೆ ಮದ್ದು ನೀಡಿದ್ದ ಶಾರ್ಪ್ ಶೂಟರ್ ವೆಂಕಟೇಶ್(64) ಅವರನ್ನು ಗುರುವಾರ ಗಾಯಗೊಂಡ ಆನೆಯೊಂದು ತುಳಿದು ಕೊಂದು ಹಾಕಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಲಿಯೂರು ಗ್ರಾಮದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ಅರವಳಿಕೆ ತಜ್ಞ ವೆಂಕಟೇಶ್ ಅವರ ಮೇಲೆ ಆನೆ ದಾಳಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ವೆಂಕಟೇಶ್ ಅವರು ಆನೆಯತ್ತ ಟ್ರ್ಯಾಂಕ್ವಿಲೈಸರ್ ಡಾರ್ಟ್ ಅನ್ನು ಹಾರಿಸಿದ್ದರು. ಅದು ಆನೆ ಹಿಂತಿರುಗಿ ಅವರ ಕಡೆಗೆ ಓಡುವಂತೆ ಪ್ರೇರೇಪಿಸಿತು. ಇದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವೆಂಕಟೇಶ್ ಅವರು ನೆಲಕ್ಕೆ ಬಿದ್ದಿದ್ದಾರೆ. ಆನೆ ಅವರನ್ನು ತುಳಿದು ಹಾಕಿತು. ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಹೇಗೋ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೂ ಅವರು ಬದುಕುಳಿಯಲಿಲ್ಲ’ ಎಂದು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್‌ಕುಮಾರ್‌ ಅವರು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಮೃತ ವೆಂಕಟೇಶ್ ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರವನ್ನು ಸ್ಥಳದಲ್ಲಿಯೇ ನೀಡಿದ್ದಾರೆ. ಶುಕ್ರವಾರ ಅವರ ಹುಟ್ಟೂರಾದ ನಾಗಲಾಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವೆಂಕಟೇಶನನ್ನು ತುಳಿದ ಆನೆ ಭೀಮನ ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ. ಜುಲೈನಲ್ಲಿ ಕಾಡಿನಲ್ಲಿ ಮತ್ತೊಂದು ಆನೆಯೊಂದಿಗೆ ನಡೆದ ಕಾದಾಟದ ಸಂದರ್ಭದಲ್ಲಿ ಭೀಮ ಗಾಯಗೊಂಡಿತ್ತು. ವೈದ್ಯರ ತಂಡ ಎರಡು ದಿನಗಳ ಹಿಂದೆ ಎರಡು ಪಳಗಿದ ಆನೆಗಳ ಸಹಾಯದಿಂದ ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಿತ್ತು. ಇಂದು ಹೆಚ್ಚಿನ ಚಿಕಿತ್ಸೆ ನೀಡಲು ಮುಂದಾದಾಗ ಈ ಅವಘಡ ಸಂಭವಿಸಿದೆ.

ಆನೆ ವೆಂಕಟೇಶ್ ಎಂದೇ ಖ್ಯಾತಿ ಪಡೆದಿದ್ದ ವೆಂಕಟೇಶ್ ಅವರು ಅರಣ್ಯ ಇಲಾಖೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಎರಡೂವರೆ ದಶಕಗಳಿಂದ ದಿನಗೂಲಿ ಆಧಾರದಲ್ಲಿ ಶಾರ್ಪ್ ಶೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್ ಅವರನ್ನು ತಾಂತ್ರಿಕ ಕಾರಣ ನೀಡಿ ಅರಣ್ಯ ಇಲಾಖೆ ಕಾಯಂಗೊಳಿಸಿಲ್ಲ. ವಯಸ್ಸು 60 ದಾಟಿದರೂ ಗೌರವಧನದಲ್ಲಿ ವೃತ್ತಿ ಮುಂದುವರಿಸಿದ್ದರು. ವೆಂಕಟೇಶ್ ಅವರು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಲ್ಲಿ ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳನ್ನು ಓಡಿಸಿದ್ದರು.

ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ವೆಂಕಟೇಶ್ ಅವರು ಹೊರಗುತ್ತಿಗೆ ನೌಕರನಾಗಿದ್ದರೂ ಅವರ ಅತ್ಯುತ್ತಮ ಸೇವೆಯನ್ನು ಇಲಾಖೆ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ. ಅಲ್ಲದೆ ವೆಂಕಟೇಶ್ ಅವರ ಪುತ್ರ ಮೋಹಿತ್‌ಗೆ ಸಂತಾಪ ಸೂಚಕ ಪತ್ರವನ್ನೂ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com