ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಪಾಸಿಟಿವ್ ಕೇಸ್ ಗಳ ರೋಗಲಕ್ಷಣದ ಸಂಪರ್ಕಿತರನ್ನು ಪರೀಕ್ಷಿಸುವುದು, ಟೆಲಿ ಐಸಿಯು ಬಳಕೆ ಮತ್ತು ಸೋಂಕಿನಿಂದಾಗಿ ಸಾವನ್ನಪ್ಪಿದವರ ಲೆಕ್ಕಪರಿಶೋಧನೆ ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ, ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಐಸಿಯು ಹಾಸಿಗೆಗಳು ಸೇರಿದಂತೆ ಕೋವಿಡ್-19 ಐಸೋಲೇಷನ್ ವಾರ್ಡ್ ಸ್ಥಾಪಿಸುವಂತೆ ಸಲಹೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಇಂದು ಸುತ್ತೋಲೆ ಹೊರಡಿಸಿದ್ದು, ನಿರ್ದೇಶನಗಳನ್ನು ಅನುಸರಿಸಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ರಾಜ್ಯ ಆರೋಗ್ಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
"ಕೋವಿಡ್ -19 ಅನ್ನು ಮೊದಲೇ ಪತ್ತೆಹಚ್ಚಲು ಮತ್ತು ರೋಗಿಗೆ ಆರಂಭಿಕ ಚಿಕಿತ್ಸೆಯನ್ನು ಪ್ರಾರಂಭಿಸಲು ಪರೀಕ್ಷೆ ಆಧಾರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ನೀಡಲಾದ ಉದ್ದೇಶಿತ ಪರೀಕ್ಷಾ ಮಾನದಂಡಗಳ ಜೊತೆಗೆ, ಎಲ್ಲಾ ರೋಗಲಕ್ಷಣದ ನಿಕಟ ಸಂಪರ್ಕಿತರನ್ನು ಸಹ ಕೋವಿಡ್ 19 ಗಾಗಿ ಪರೀಕ್ಷಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಪ್ರಸ್ತುತ ಸುಮಾರು 400 ಕೋವಿಡ್ -19 ರೋಗಿಗಳು ಹೋಮ್ ಐಸೊಲೇಶನ್ ನಲ್ಲಿದ್ದಾರೆ. ಕೆಲವರು ಆಸ್ಪತ್ರೆಗಳಲ್ಲಿ ಸಾಮಾನ್ಯ ಪ್ರತ್ಯೇಕ ವಾರ್ಡ್‌ಗಳಲ್ಲಿ ದಾಖಲಾಗಿದ್ದಾರೆ. "ಇನ್ಮುಂದೆ, ಹೋಮ್ ಐಸೊಲೇಶನ್ ನಲ್ಲಿರುವ ಮತ್ತು ಸಾಮಾನ್ಯ ವಾರ್ಡ್‌ಗಳಲ್ಲಿ ದಾಖಲಾಗಿರುವ ಕೋವಿಡ್ -19 ರೋಗಿಗಳ ವೈದ್ಯಕೀಯ ಸ್ಥಿತಿ ಮತ್ತು ರೋಗಲಕ್ಷಣಗಳನ್ನು ನಿರ್ಣಯಿಸಲು ಮತ್ತು ಚಿಕಿತ್ಸೆಗಾಗಿ ಮುಂದಿನ ಕ್ರಮಗಳನ್ನು ಸೂಚಿಸಲು, PHC/UPHC/ನಮ್ಮ ಚಿಕಿತ್ಸಾಲಯಗಳ ವೈದ್ಯರು/ ಅರೆವೈದ್ಯಕೀಯ ಸಿಬ್ಬಂದಿಗಳು ಅವರಿರುವಲ್ಲಿಗೆ ಒಮ್ಮೆಯಾದರು ಭೇಟಿ ನೀಡುತ್ತಾರೆ ಎಂದು ತಿಳಿಸಿದೆ.
"ಐಸಿಯುಗಳಲ್ಲಿ ದಾಖಲಾದ ಎಲ್ಲಾ ಕೋವಿಡ್ ರೋಗಿಗಳನ್ನು ಹಿಂದಿನ ಕೋವಿಡ್ ಅಲೆಗಳ ಸಮಯದಲ್ಲಿ ಮಾಡಿದಂತೆ, ರಾಜ್ಯ ಪ್ರಧಾನ ಕಛೇರಿಯಿಂದ ಟೆಲಿ ಐಸಿಯು ಮೂಲಕ ಮೇಲ್ವಿಚಾರಣೆ ಮಾಡಬೇಕು.ಮತ್ತು ಕೋವಿಡ್ ಸಾವುಗಳ ಲೆಕ್ಕಪರಿಶೋಧನೆಗಾಗಿ ಜಿಲ್ಲಾ ಡೆತ್ ಆಡಿಟ್ ಸಮಿತಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
"ರಾಜ್ಯ ಡೆತ್ ಆಡಿಟ್ ಸಮಿತಿಯು ಕೋವಿಡ್ ಸಾವುಗಳನ್ನು ಆಡಿಟ್ ಮಾಡುತ್ತದೆ ಮತ್ತು ಕಾಲಕಾಲಕ್ಕೆ ಆರೋಗ್ಯ ಆಯುಕ್ತಾಲಯಕ್ಕೆ ಶಿಫಾರಸುಗಳೊಂದಿಗೆ ವರದಿಗಳನ್ನು ಸಲ್ಲಿಸುತ್ತದೆ. ಕೋವಿಡ್-19 ಪರೀಕ್ಷೆಗಾಗಿ ಸಿಟಿ ಥ್ರೋಕ್ಸ್ ಸ್ಕ್ಯಾನ್ ಬಳಸಬಾರದು ಎಂದು ನಿರ್ದೇಶಿಸಲಾಗಿದೆ. ಈ ವಿಷಯದಲ್ಲಿ ಕಟ್ಟುನಿಟ್ಟಾದ ಸೂಚನೆಗಳು ಮತ್ತು ನಿಯಮಗಳನ್ನು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು ಮತ್ತು ರೋಗನಿರ್ಣಯ ಕೇಂದ್ರಗಳಿಂದ ನಿರೀಕ್ಷಿಸಲಾಗಿದೆ.
Advertisement