ಬೆಂಗಳೂರು: ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ; ಪ್ರಿಯತಮೆಯ ಚಿಕ್ಕಪ್ಪ ಸೇರಿ ನಾಲ್ವರ ಬಂಧನ
ತಾನು ಮದುವೆ ಮಾಡಿಕೊಳ್ಳಬೇಕಿದ್ದ ಅತ್ತೆ ಮಗಳ ಜತೆ ಮೊಬೈಲ್‌ನಲ್ಲಿ ಚಾಟಿಂಗ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ್ದ ಮೃತನ ಗೆಳತಿಯ ಸೋದರ ಸಂಬಂಧಿ ಸೇರಿದಂತೆ ನಾಲ್ವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published: 02nd February 2023 02:03 PM | Last Updated: 02nd February 2023 02:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ತಾನು ಮದುವೆ ಮಾಡಿಕೊಳ್ಳಬೇಕಿದ್ದ ಅತ್ತೆ ಮಗಳ ಜತೆ ಮೊಬೈಲ್‌ನಲ್ಲಿ ಚಾಟಿಂಗ್ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ್ದ ಮೃತನ ಗೆಳತಿಯ ಸೋದರ ಸಂಬಂಧಿ ಸೇರಿದಂತೆ ನಾಲ್ವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮತ್ತಿಕೆರೆ ಕಾಲೋನಿ ನಿವಾಸಿ ಗೋವಿಂದರಾಜು (19) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮತ್ತಿಕೆರೆಯ ಅನಿಲ್ ಹಾಗೂ ಆತನ ಸಹಚರರಾದ ಆಂದ್ರಹಳ್ಳಿ ನಿವಾಸಿಗಳಾದ ಭರತ್, ಕಿಶೋರ್ ಮತ್ತು ಲೋಹಿತ್ ಬಂಧಿತರಾಗಿದ್ದಾರೆ.
ಮಾತುಕತೆ ನೆಪದಲ್ಲಿ ಮನೆಯಿಂದ ಜ.30ರ ರಾತ್ರಿ ಗೋವಿಂದರಾಜುನನ್ನು ಕರೆತಂದು ಬಳಿಕ ಕೊಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನ ಕಾಡಿಗೆ ಮೃತದೇಹವನ್ನು ಎಸೆದು ನಗರಕ್ಕೆ ಮರಳಿದ್ದರು.
ಇದನ್ನೂ ಓದಿ: ಪಾರ್ಕ್‌ನಲ್ಲಿ ಕುಳಿತಿದ್ದ ಮಹಿಳೆ, ಸ್ನೇಹಿತನಿಂದ ಹಣ ವಸೂಲಿ ಮಾಡಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಬಂಧನ
ಸೋಮವಾರ ಸಂಜೆ ಬೈದರಹಳ್ಳಿಯ ಭರತ್ ಒಡೆತನದ ಶೆಡ್‌ನಲ್ಲಿ ಕೊಲೆ ನಡೆದಿದೆ, ಅನಿಲ್ ಕುಮಾರ್ ಯುವತಿಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದು, ಆಕೆಯ ಶಿಕ್ಷಣಕ್ಕೂ ಹಣ ನೀಡುತ್ತಿದ್ದ. ಆಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಆತ ಆಕೆಯನ್ನು ಮದುವೆಯಾಗಲು ಬಯಸಿದ್ದರು.
ಈ ಬಗ್ಗೆ ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಸುರೇಶ್ ನೇತೃತ್ವದ ತಂಡವು, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ನಗರಕ್ಕೆ ಸ್ಥಳಾಂತರಿಸಲಾಗುವುದು ಎಂದು ಡಿಸಿಪಿ ಹೇಳಿದರು.