ಬೆಂಗಳೂರಿನ ಟ್ರಾಫಿಕ್ಗೆ ಮತ್ತೊಂದು ಬಲಿ: ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಕಂದಮ್ಮ ಸಾವು!
ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ.
Published: 03rd February 2023 10:53 AM | Last Updated: 03rd February 2023 03:03 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಾಸನದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಕರೆತರುತ್ತಿದ್ದ ಒಂದೂವರೆ ವರ್ಷದ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ. ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದಿಂದ ಗೊರಗುಂಟೆಪಾಳ್ಯದವರೆಗಿನ ಮುಖ್ಯರಸ್ತೆಯಲ್ಲಿ ಗುರುವಾರ ಉಂಟಾಗಿದ್ದ ವಿಪರೀತ ದಟ್ಟಣೆಯಲ್ಲಿ ಆಂಬುಲೆನ್ಸ್ ಸಿಲುಕಿತ್ತು.
ಸೂಕ್ತ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸದಿದ್ದರಿಂದ ಮೃತಪಟ್ಟಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ . ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್ ನೆಲಮಂಗಲ ಬಳಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ. ಹಾಸನದಲ್ಲಿ ಗುರುವಾರ ಅಪಘಾತ ಸಂಭವಿಸಿತ್ತು. ಗಾಯಗೊಂಡಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿತ್ತು.
ಹಾಸನದಿಂದ ಹೊರಡುವ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿದ್ದ ಚಾಲಕ ಮದುಸೂದನ್, 'ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ದಟ್ಟಣೆ ಹಾಗೂ ಸಿಗ್ನಲ್ ಮುಕ್ತ ರಸ್ತೆ ವ್ಯವಸ್ಥೆ ಕಲ್ಪಿಸಿ' ಎಂದು ಪೊಲೀಸರನ್ನು ಕೋರಿದ್ದರು.
ಹಾಸನ ಬಿಟ್ಟಿದ್ದ ಅಂಬುಲೆನ್ಸ್ ನೆಲಮಂಗಲಕ್ಕೆ ಬರುತ್ತಿದ್ದಂತೆ ದಟ್ಟಣೆಯಲ್ಲಿ ಸಿಲುಕಿತ್ತು. ನಿಗದಿತ ಸಮಯಕ್ಕೆ ನಗರ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಂಬುಲೆನ್ಸ್‌ನಲ್ಲೇ ಮಗು ಮೃತಪಟ್ಟಿದೆ ಎಂದು ಸ್ಥಳೀಯರು ತಿಳಿಸಿದರು.
ಮಗು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮಗುವನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಕಲ್ಪಿಸದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.