ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು!

ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಲೇಡೀಸ್ ಬೀಚ್
ಲೇಡೀಸ್ ಬೀಚ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್'ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಪ್ರಾಜೆಕ್ಟ್ ಸೀಬರ್ಡ್ ಬೇಸ್ ಎಂದೂ ಕರೆಯಲ್ಪಡುವ ಯೋಜನೆಯನ್ನು ಬೀಚ್ ಬಳಿ ಕೈಗೊಳ್ಳಲಾಗಿದ್ದು, ಗಡಿಯಾರ ಗೋಪುರಗಳನ್ನು ತಲುಪಲು ಕಡಲತೀರದ ಪಕ್ಕದ ಬೆಟ್ಟದ ಉದ್ದಕ್ಕೂ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ಭಾರತೀಯ ನೌಕಾಪಡೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೀಚ್'ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಐಎನ್‌ಎಸ್ ಕದಂಬ ಅಡಿಯಲ್ಲಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದ್ದು, ಯೋಜನೆಗೆ ಬೈತ್‌ಕೋಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಯಿಂದ ಮಳೆಗಾಲದಲ್ಲಿ ನಮ್ಮ ಮನೆಗಳಿಗೆ ಅಪಾಯಗಳು ಎದುರಾಗಲಿದೆ ಎಂದು ಹೇಳಿದ್ದಾರೆ.

ಮಣ್ಣು ತೆಗೆಯುವ ಯಂತ್ರದಿಂದ ರಸ್ತೆಗಳನ್ನು ಅಗೆಯಲಾಗುತ್ತಿದ್ದು, ಇದು ಪ್ರಮುಖ ಬೆದರಿಕೆಯಾಗಿದೆ. 2011ರಲ್ಲಿ ಖಡ್ವಾಡದಲ್ಲಿ ಇದೇ ರೀತಿ ರಸ್ತೆ ನಿರ್ಮಾಣ ಮಾಡಲಾಗಿತ್ತು., ಆದರೆ, ಮಳೆಗಾಲದಲ್ಲಿ ಗುಡ್ಡ ಕುಸಿದಿತ್ತು. ಇಂತಹ ಘಟನೆ ಮರುಕಳಿಸಿದರೆ ಯಾರು ಹೊಣೆ ಎಂದು ಸ್ಥಳೀಯ ಮಾಜಿ ಶಾಸಕ ಸತೀಶ್ ಸೇಲ್ ಪ್ರಶ್ನಿಸಿದ್ದಾರೆ.

ರಸ್ತೆ ನಿರ್ಮಾಣದಿಂದ ಎರಡು ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಒಂದು ಭೂ ಕುಸಿತ, ಎರಡನೆಯದು ಬೀಚ್'ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸುವುದಾಗಿದೆ. ಈ ಬೀಚ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಮಹಿಳೆಯರಿಗೆ ಸ್ನಾನ ಮಾಡಲು ಮತ್ತು ಈಜಲು ಬೀಚ್ ಮೀಸಲಾಗಿತ್ತು. ಈ ವೇಳೆ ಸ್ಥಳೀಯರು ಬೀಚ್'ಗೆ ಬೇಟಿ ನೀಡುವುದಕ್ಕೆ ಅವಕಾಶವಿರಲಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ನಿವಾಸಿ ಶ್ರೀಧರ್ ಹರಿಕಾಂತ ಮಾತನಾಡಿ, ನೌಕಾಪಡೆ ಮತ್ತು ಸ್ಥಳೀಯ ಗ್ರಾಮಸ್ಥರ ನಡುವೆ ಒಂದು ವರ್ಷದ ಹಿಂದಿನಿಂದಲೂ ಹಗ್ಗಜಗ್ಗಾಟ ಆರಂಭವಾಗಿದೆ. ಆಗಾಗ ಪ್ರತಿಭಟನೆಗಳೂ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಮತ್ತೋರ್ವ ನಿವಾಸಿ ಪ್ರಮೋದ್ ಅಂಬಿಗ್ ಮಾತನಾಡಿ, ಬೆಟ್ಟದಿಂದ ನೈಸರ್ಗಿಕವಾಗಿ ಹರಿಯುವ ನೀರನ್ನು ತಡೆದಿದ್ದಾರೆ. ಅದನ್ನು ನಾವು ವಿರೋಧಿಸಿದಾಗ ನೀರು ಹರಿಯಲು ಎರಡು ದೊಡ್ಡ ಪೈಪ್ ಗಳನ್ನು ಅಳವಡಿಸಿದರು ಎಂದು ಹೇಳಿದ್ದಾರೆ.

ನೌಕಾಪಡೆಯ ರಸ್ತೆ ನಿರ್ಮಾಣ ಯೋಜನೆಗೆ ಗುರುವಾರ ಕೂಡ ಪ್ರತಿಭಟನೆ ನಡೆದಿದೆ. ಸತೀಶ್ ಸೇಲ್ ನೈತೃತ್ವದಲ್ಲಿ ಈ ಪ್ರತಿಭಟನೆ ನಡೆಸಿದ್ದು, ‘ಕಂದಾಯ ಇಲಾಖೆಯ ದಾಖಲೆಗಳಲ್ಲಿ ಈ ಆಸ್ತಿ ಅರಣ್ಯಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಯೋಜನೆ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ನೌಕಾಪಡೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರು, ಬೈತಕೋಲ್ ನಿವಾಸಿಗಳೊಂದಿಗೆ ಸಭೆ ನಡೆಸಿದರು, ಸಭೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಮತ್ತು ಕೆಲವು ನೌಕಾಪಡೆ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆ ಬಳಿಕ ಮಾತನಾಡಿದ ಪ್ರಭುಲಿಂಗ ಅವರು, ಸಭೆಯಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ನೌಕಾಪಡೆಯ ಎಂಜಿನಿಯರ್‌ಗಳು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಆದರೂ ಸಮಸ್ಯೆ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ತಂಡ ರಚಿಸಿದ್ದೇನೆ ಎಂದು ಹೇಳಿದರು.

ನೌಕಾಪಡೆಯ ಕಡೆಯಿಂದ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ. ಅವರಿಗೆ ಮಂಜೂರಾದ ಭೂಮಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಇದು ಯೋಜನೆ ಪ್ರಾಜೆಕ್ಟ್ ಸೀಬರ್ಡ್‌ನ ಭಾಗವಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com