ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ ಬೋಧನೆ: ಧೋನಿ ಶಾಲೆ ಸೇರಿ 500ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ಜಾರಿ

ರಾಜ್ಯದ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ/ಐಪಿಎಸ್ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಧೋನಿ ಗ್ಲೋಬರ್ ಶಾಲೆ ಸೇರಿದಂತೆ ನಗರದ 500ಕ್ಕೂ ಹೆಚ್ಚು ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ/ಐಪಿಎಸ್ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಧೋನಿ ಗ್ಲೋಬರ್ ಶಾಲೆ ಸೇರಿದಂತೆ ನಗರದ 500ಕ್ಕೂ ಹೆಚ್ಚು ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ರಿಕೆಟಿಗ ಎಂಎಸ್ ಧೋನಿ ಹೆಸರಿನಲ್ಲಿ ಬೆಂಗಳೂರಿನ ಕೂಡ್ಲು ಗೇಟ್‌ನಲ್ಲಿರುವ ಖಾಸಗಿ ಶಾಲೆ ಸೇರಿದಂತೆ ದಕ್ಷಿಣ ಶೈಕ್ಷಣಿಕ ಜಿಲ್ಲೆಯ 303 ಶಾಲೆಗಳು, ಬೆಂಗಳೂರು ಉತ್ತರ-1 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 147 ಶಾಲೆ, ಬೆಂಗಳೂರು ಉತ್ತರ-2ರಲ್ಲಿ 32 ಶಾಲೆಗಳು ಸೇರಿದಂತೆ ಒಟ್ಟಾರೆ 500ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ಜಾಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಬೈಲಾಂಜನಪ್ಪ ಅವರು ಮಾತನಾಡಿ, ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ವರದಿ ಸಲ್ಲಿಸಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮವನ್ನು ಬೋಧಿಸುತ್ತಿರುವುದು ಕಂಡುಬಂದಿದೆ. ಬಿಇಒ ಅವರು ತ್ರಿಸದಸ್ಯ ಸಮಿತಿ ರಚಿಸಿ ಶಾಲೆಗಳಲ್ಲಿ ಪರಿಶೀಲನೆ ನಡೆಸಿತ್ತು.  ಈ ವೇಳೆ ಶಾಲೆಗಳು ರಾಜ್ಯದ ಪಠ್ಯಕ್ರಮ ಬೋಧಿಸುವುದಾಗಿ ಅನುಮತಿ ಪಡೆದುಕೊಂಡು, ಸಿಬಿಎಸ್'ಸಿ ಬೋಧಿಸುತ್ತಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಶಾಲೆಗಳು ಸುವ್ಯವಸ್ಥಿತವಾಗಿದ್ದು, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಆದರೆ, ಪಠ್ಯಕ್ರಮದಿಂದಾಗಿ ಪಾಲಕರು ಹಾಗೂ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಶಾಲೆಗಳಿಗೆ ಶನಿವಾರದವರೆಗೂ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಶಿಕ್ಷಣ ಇಲಾಖೆಯ ಈ ಹೇಳಿಕೆಯನ್ನು ಶಾಲೆಗಳು ನಿರಾಕರಿಸಿದ್ದು, ತಾವು ಸಿಬಿಎಸ್‌ಇ ಪಠ್ಯಕ್ರಮವನ್ನು ಬೋಧಿಸುತ್ತಿಲ್ಲ ಎಂದು ಹೇಳಿಕೊಂಡಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಲೆಯ ಅಧಿಕಾರಿಗಳು, ಸಿಬಿಎಸ್‌ಇ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲಾಗಿದೆ. “ನಾವು ಕಳೆದ ವಾರ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ನೀಡುವುದು ಸೇರಿದಂತೆ ರಾಜ್ಯ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆದಿದ್ದೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನಮ್ಮ ಶಾಲೆಯನ್ನೂ ಹಲವು ಬಾರಿ ಪರಿಶೀಲನೆ ನಡೆಸಿದ್ದರು. ಸಿಬಿಎಸ್‌ಇ ಅಫಿಲಿಯೇಷನ್ ಮುಗಿದ ನಂತರ, ಮುಂದಿನ ಶೈಕ್ಷಣಿಕ ವರ್ಷದಿಂದ ನಾವು ಸಿಬಿಎಸ್‌ಇ ಪಠ್ಯಕ್ರಮ ತರಗತಿಗಳನ್ನು ಪ್ರಾರಂಭಿಸುತ್ತೇವೆಂದು ಹೇಳಿದ್ದಾರೆ.

ಇನ್ನು ನಗರದಲ್ಲಿ ಆರಂಭವಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಸರಿನ ಶಾಲೆಯನ್ನು ಶ್ರೀ ಶಾರದಾ ಎಜುಕೇಶನ್ ಟ್ರಸ್ಟ್ ನಡೆಸುತ್ತಿದೆ. ಶಾಲೆಯು 2021 ರಿಂದ ಕಾರ್ಯನಿರ್ವಹಿಸುತ್ತಿದ್ದು, ಧೋನಿಯವರು ಶಾಲೆಯ 'ಮಾರ್ಗದರ್ಶಿ' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com